ಪಕ್ಷದಲ್ಲೇ ಉಳಿದುಕೊಳ್ಳುವಂತೆ ನಾರಾಯಣಗೌಡರಿಗೆ ಯಡಿಯೂರಪ್ಪ ಬುದ್ಧಿವಾದ

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಶತಾಯಗತಾಯ ಕಮಲ ಅರಳಿಸಬೇಕೆಂದು ಪಣತೊಟ್ಟಿದ್ದ ಬಿಜೆಪಿ (BJP) ಕಲಿಗಳಿಗೆ ಎದುರಾಗಿದ್ದ ಮಾಸ್ಟರ್ ಸ್ಟ್ರೋಕ್‌ಗೆ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಚಿಕಿತ್ಸೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ (KR Pete) ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಪಡೆಯುವ ಮೂಲಕ ಸಚಿವ ನಾರಾಯಣಗೌಡ (Narayana Gowda) ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿಯ ಗೆಲುವಿನ ಬಾವುಟ ಹಾರಿಸಿದ್ದರು. ಉಪಚುನಾವಣೆಯಲ್ಲಿ ಗೆಲುವು ಪಡೆದ ಬಳಿಕ ನಾರಾಯಣಗೌಡರಿಗೆ ಒಂದಲ್ಲಾ ಎರಡೆರಡು ಖಾತೆ ನೀಡಿ ಸಚಿವರನ್ನಾಗಿ ಸಹ ಮಾಡಲಾಗಿತ್ತು. ಇಷ್ಟು ದಿನಗಳ ಕಾಲ ತಮಗೆ ನೀಡಿದ್ದ ಖಾತೆಯ ಜವಾಬ್ದಾರಿ ಹಾಗೂ ಬಿಜೆಪಿ ಸಂಘಟನೆಯ ಕೆಲಸವನ್ನು ಅಚ್ಚುಕಟ್ಟಾಗಿ ನಾರಾಯಣಗೌಡ ನಿಭಾಯಿಸುತ್ತಿದ್ದರು.

ಪಕ್ಷದ ಆಂತರಿಕ ಮಟ್ಟದಲ್ಲಿ ಅದೇನು ಆಯ್ತೋ ಏನೋ ಗೊತ್ತಿಲ್ಲ. ನಾರಾಯಣಗೌಡ ಬಿಜೆಪಿ ಬಾಗಿಲಿನಿಂದ ಒಂದು ಕಾಲನ್ನು ಕಿತ್ತು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದರು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ನಾರಾಯಣಗೌಡರನ್ನು ಕರೆದುಕೊಂಡು ಕೆಆರ್ ಪೇಟೆ ಕಾಂಗ್ರೆಸ್ ಅಭ್ಯರ್ಥಿ ಮಾಡಲು ಸಹ ಮುಂದಾಗಿದ್ದರು. ಇದನ್ನು ಕಂಡ ಬಿಜೆಪಿ ನಾಯಕರು ಮಂಡ್ಯ ಜಿಲ್ಲೆಯಲ್ಲಿ ಹೀಗೆಲ್ಲಾ ಆಯ್ತಾಲ್ಲಾ ಎಂದು ತಲೆಕೆಡಿಸಿಕೊಂಡಿದ್ದರು. ಇದನ್ನೂ ಓದಿ: ಕೋಲಾರ, ವರುಣಾ ಅಲ್ಲ – ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ?

ನಾರಾಯಣಗೌಡರಿಂದ ಬಿಜೆಪಿ ನಾಯಕರಿಗೆ ಎದುರಾಗಿದ್ದ ಮಾಸ್ಟರ್ ಸ್ಟ್ರೋಕ್‌ಗೆ ಚಿಕಿತ್ಸೆ ನೀಡಲು ಈಗ ಮಾಜಿ ಸಿಎಂ ಯಡಿಯೂರಪ್ಪ ಅವರೇ ಬೇಕಾಗಿದ್ದಾರೆ. ಯಡಿಯೂರಪ್ಪ ಅವರು ನಾರಾಯಣಗೌಡ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಬಿಜೆಪಿ ಪಕ್ಷ ಬಿಟ್ಟು ಹೋಗಬೇಡ, ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಿದ್ದು ನೀನು. ಮತ್ತೆ ನಿನ್ನ ಗೆಲುವಿನಲ್ಲಿ ನಾನು ಮತ್ತು ವಿಜಯೇಂದ್ರ ಇಬ್ಬರೂ ಇರುತ್ತೇವೆ. ಮುಂದೆಯೂ ನಮ್ಮ ಸರ್ಕಾರ ಬರುತ್ತೆ ಆಗಲೂ ಸಚಿವನಾಗುತ್ತೀಯಾ, ಕಾಂಗ್ರೆಸ್‌ಗೆ ಹೋದರೆ ಮೂಲೆ ಗುಂಪಾಗುತ್ತೀಯಾ. ಬಿಜೆಪಿಯಲ್ಲಿ ಇದ್ದು ಚುನಾವಣೆ ಎದುರಿಸು ಎಂದು ನಾರಾಯಣಗೌಡರಿಗೆ ಯಡಿಯೂರಪ್ಪ ಬುದ್ಧಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಿತ ಹೇಳಿಕೆ – ಸತ್ಯವೇ ನನ್ನ ದೇವರು ಎಂದ ರಾಹುಲ್

ಯಡಿಯೂರಪ್ಪ ಅವರ ಮಾತಿಗೆ ನಾರಾಯಣಗೌಡ ಒಕೆ ಎಂದಿದ್ದು, ಪಕ್ಷ ತೊರೆಯುವ ವಿಚಾರವನ್ನು ಸದ್ಯಕ್ಕೆ ಕೈ ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *