ಕೈ ಹಿರಿಯ ನಾಯಕರು ಅಪ್ರಬುದ್ಧ ಅಧ್ಯಕ್ಷರಿಗೆ ಪಾಠಮಾಡಬೇಕಿದೆ: ಬಿಎಸ್‍ವೈ

ಬೆಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡರು ತಮ್ಮ ಅಪ್ರಬುದ್ಧ ಅಧ್ಯಕ್ಷರಿಗೆ ಈ ಕುರಿತು ಪಾಠ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ರಾಹುಲ್ ಆರೋಪಗಳಿಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ತಮ್ಮ ಅಪ್ರಬುದ್ಧತೆಯನ್ನು ಪದೇಪದೆ ಸಾಬೀತು ಪಡಿಸುತ್ತಲೇ ಇದ್ದಾರೆ. ಬೇರೆ ರಾಜ್ಯಗಳಂತೆ ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗುವ ಭಯದಲ್ಲಿರುವ ಅವರು ಪೂರ್ವಾಪರ ತಿಳಿಯದೇ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಅವರು ನನ್ನ ವಿರುದ್ಧ ಮನಬಂದಂತೆ ಮಾತನಾಡುತ್ತಿರುವುದು ವಿಪರ್ಯಾಸವೇ ಸರಿ ಎಂದು ಕಿಡಿಕಾರಿದ್ದಾರೆ.

ನ್ಯಾಯಾಲಯವೇ ನನ್ನನ್ನು ದೋಷಮುಕ್ತಗೊಳಿಸಿದ್ದರೂ, ಸುಳ್ಳು ಮಾಹಿತಿಯೊಂದಿಗೆ ಹಗುರವಾಗಿ ಮಾತನಾಡುವುದು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಗೌರವ ತರುವಂಥದ್ದಲ್ಲ. ಅದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ರಾಹುಲ್ ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ರಾಜಕೀಯದ ಬಗ್ಗೆ ಏನೂ ತಿಳಿಯದೇ, ಯಾರೋ ಬರೆದುಕೊಟ್ಟಿದ್ದನ್ನು ಓದುವ ರಾಹುಲ್ ಮಾತುಗಳನ್ನು ಜನರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ತಾವು ಮಾಡುವ ಸುಳ್ಳು ಆರೋಪಗಳನ್ನು ಕರ್ನಾಟಕದ ಜನ ನಂಬುತ್ತಾರೆಂಬ ಭ್ರಮೆಯಿಂದ ಅವರು ಹೊರಬರಲಿ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಜ್ಞಾವಂತರು ಕಾಂಗ್ರೆಸ್‍ಗೆ ಈ ಸಲ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದಿದ್ದಾರೆ.

ತಮ್ಮ ಹುಳುಕನ್ನು ಮುಚ್ಚಿಡಲು ಇನ್ನೊಬ್ಬರತ್ತ ಬೆಟ್ಟು ತೋರಿಸುವ ಕಾಂಗ್ರೆಸ್ ನಾಯಕರ ಚಾಳಿಯನ್ನೇ ರಾಹುಲ್ ಗಾಂಧಿಯವರೂ ಅನುಸರಿಸುತ್ತಿದ್ದಾರೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಮುಚ್ಚಿಡಲು ನ್ಯಾಯಾಲಯ ಇತ್ಯರ್ಥಗೊಳಿಸಿದ ವಿಚಾರವನ್ನು ಕೆದಕುತ್ತಿದ್ದಾರೆ. ರಾಹುಲ್ ಗಾಂಧಿಯವರು ಏನೇ ಮಾಡಿದರೂ ಕಾಂಗ್ರೆಸ್‍ನ ದುರಾಡಳಿತವನ್ನು ನಮ್ಮ ಜನ ಮರೆಯುವುದಿಲ್ಲ ಎಂದು ಬರೆದು ಬಿಎಸ್‍ವೈ ವಾಗ್ದಾಳಿ ನಡೆಸಿದ್ದಾರೆ.

 

Comments

Leave a Reply

Your email address will not be published. Required fields are marked *