ಯಡಿಯೂರಪ್ಪ ಪಟ್ಟಾಭಿಷೇಕ – ಇಂದಿನಿಂದ ಬಿಜೆಪಿ ರಾಜ್ಯಭಾರ ಶುರು

ಬೆಂಗಳೂರು: ಹಲವು ದಿನಗಳ ದೋಸ್ತಿಗಳ ಆಟಕ್ಕೆ ತೆರಬಿದ್ದಿದ್ದು, ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಪಕ್ಷದ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಇಂದು ಸಂಜೆ 6.32 ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡಿದ ಬಿಎಸ್‍ವೈ ಅವರಿಗೆ ರಾಜ್ಯಪಾಲ ವಜೂಭಾಯ್ ವಾಲಾ ಅವರು ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಪ್ರಮಾಣವಚನಕ್ಕೂ ಮುನ್ನ ಬಿಎಸ್‍ವೈ ಅವರು ಕಾಡುಮಲ್ಲೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಿಎಸ್‍ವೈ ಅವರು ಈ ಹಿಂದೆ ಮೂರು ಬಾರಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ ಅವರು ಯಾವತ್ತೂ 5 ವರ್ಷ ಪೂರ್ಣಾವಧಿ ಮಾಡಿರಲಿಲ್ಲ.

2007ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡವು. ಒಪ್ಪಂದಂತೆ 20 ತಿಂಗಳ ನಂತರ ಕುಮಾರಸ್ವಾಮಿ ಅಧಿಕಾರ ಬಿಟ್ಟು ಕೊಡಲು ನಿರಾಕರಿಸಿದರು. ಈ ವಿಚಾರ ರಾಜ್ಯಾದ್ಯಂತ ಭಾರೀ ಗದ್ದಲವನ್ನೇ ಸೃಷ್ಟಿ ಮಾಡಿತ್ತು. ಅಲ್ಲದೆ ಜೆಡಿಎಸ್ ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದಾಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಆ ನಂತರ ಮತ್ತೆ ಎರಡು ಪಕ್ಷಗಳ ನಡುವಿನ ಭಿನ್ನಮತ ಶಮನಗೊಂಡು 2007ರಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಈ ವೇಳೆ ಜೆಡಿಎಸ್ ಬೆಂಬಲ ನಿಡದ ಕಾರಣ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಾಗದೆ 7 ದಿನದಲ್ಲಿ ಬಿಎಸ್‍ವೈ ಅವರು ಅಧಿಕಾರ ಕಳೆದುಕೊಳ್ಳುವಂತಾಗಿತ್ತು.

ಮೈತ್ರಿ ಮುರಿದು ಬಿದ್ದ ನಂತರ ಅಂದರೆ 2008ರಲ್ಲಿ ರಾಜ್ಯಾದ್ಯಂತ ಬಿಜೆಪಿ ಹಾಗೂ ಯಡಿಯೂರಪ್ಪನವರ ಕುರಿತು ಅನುಕಂಪದ ಅಲೆಯೇ ಸೃಷ್ಟಿಯಾಗುವ ಮೂಲಕ ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾದರು. ಆದರೆ ಸರ್ಕಾರ ಒಂದು ವರ್ಷ ಪೂರೈಸುವ ಒಳಗಾಗಿ ಅವರ ವಿರುದ್ಧ 17 ಮಂದಿ ಶಾಸಕರು ಅವಿಶ್ವಾಸ ತೋರಿದ್ದರು. ನಂತರ ಅಕ್ರಮ ಗಣಿ ಹಗರಣ ಹಾಗೂ ಡಿನೋಟಿಫಿಕೇಷನ್ ಗೆ ಸಿಲುಕಿದ ಯಡಿಯೂರಪ್ಪ ಕೇವಲ 38 ತಿಂಗಳು ಅಧಿಕಾರ ನಡೆಸಿ 2012 ನವೆಂಬರ್ ನಲ್ಲಿ ಜೈಲು ಪಾಲಾಗಿದ್ದರು. ಬಳಿಕ ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಕಟ್ಟಿದ್ದರು. ಆದರೆ ಅದರಲ್ಲಿ ಯಶಸ್ಸು ಕಾಣುವಲ್ಲಿ ವಿಫಲರಾದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ ಎದುರಿಸಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಕೆಲವೇ ಸೀಟುಗಳು ಕಡಿಮೆಯಾದ್ರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತು ಆಗದೇ, ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಆಗ ಕೈ-ತೆನೆ ದೋಸ್ತಿ ಸರ್ಕಾರ ಆಡಳಿತಕ್ಕೆ ಬಂದಿತ್ತು. 14 ತಿಂಗಳ ನಂತರ ದೋಸ್ತಿ ಕುಸಿದು ಬಿದ್ದ ಕಾರಣ, ಬಿಎಸ್‍ವೈ ಮತ್ತೆ ಸಿಎಂ ಆಗಿದ್ದಾರೆ. ರಾಜ್ಯದ 26ನೇ ಸಿಎಂ ಆಗಿ, ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ 4ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

Comments

Leave a Reply

Your email address will not be published. Required fields are marked *