– ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತ
ಬೆಂಗಳೂರು: ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟಕ್ಕೆ 300ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆಯೇ ತಿಳಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ. ಕರ್ನಾಟಕದಲ್ಲಿ 22 ಸೀಟು ಗೆಲ್ಲುತ್ತೇವೆ ಎಂದು ನಾನು ಹೇಳಿದ್ದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈಗ 22 ಸೀಟು ಬರುತ್ತವೆ ಅಂತ ಸಮೀಕ್ಷೆಗಳು ವರದಿ ನೀಡಿವೆ. ಇದಕ್ಕೆ ಆಶ್ಚರ್ಯ ಪಡುವಂತಿಲ್ಲ, ನಮ್ಮ ನಿರಂತರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರಸ್‍ನ ಕೆಲ ಮುಖಂಡರು ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಜೊತೆಗಿನ ಹೊಂದಾಣಿಕೆಯಿಂದ ಯಾವುದೇ ಲಾಭ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮೇ 23ರವರೆಗೆ ಕಾಯೋಣ. ಸ್ವಂತ ಶಕ್ತಿಯಿಂದ ನಾವು ಗೆಲ್ಲುತ್ತೇವೆ ಎಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಕನಸನ್ನು ಬಿಚ್ಚಿಟ್ಟರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಟ್ವೀಟ್‍ಗೆ ಟಾಂಗ್ ಕೊಟ್ಟ ಬಿ.ಎಸ್.ಯಡಿಯೂರಪ್ಪನವರು, ಸೋಲನ್ನು ಒಪ್ಪಿಕೊಳ್ಳಲು ಆಗಲ್ಲ ಎಂದು ಹೇಳಿಕೆ ನೀಡುತ್ತಾರೆ. ಇದಕ್ಕೆ ವಿಶೇಷ ಅರ್ಥ ಕೊಡುವ ಅಗತ್ಯವಿಲ್ಲ. ಮಮತಾ ಬ್ಯಾನರ್ಜಿಯವರು ಗುಂಡಾಗಿರಿ ಮಾಡಿದ್ದರೂ ನಾವು ಪಶ್ಚಿಮ ಬಂಗಾಳದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯ ಬಗ್ಗೆ ಮೇ 23ರ ವರೆಗೆ ಕಾಯೋಣ. ಯಾವ ಯಾವ ಪಕ್ಷಗಳು ಯಾವ ನಿರ್ಣಯ ಕೈಗೊಳ್ಳುತ್ತವೆ ಅಂತ ನೋಡಿ ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲ್ಲುವುದು ಖಚಿತ. ಬಿಜೆಪಿಯ 2 ಲಕ್ಷ ಮತಗಳು ಅವರಿಗೆ ಸಿಕ್ಕಿವೆ ಎಂದು ತಿಳಿಸಿದರು.

Leave a Reply