ತಿಪ್ಪರಲಾಗ ಹಾಕಿದ್ರೂ ಬಿಎಸ್‍ವೈ ಸಿಎಂ ಮತ್ತೆ ಆಗಲ್ಲ – ಜಮೀರ್ ಅಹ್ಮದ್ ಲೇವಡಿ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಎಷ್ಟೇ ತಿಪ್ಪರಲಾಗ ಹಾಕಿದ್ರೂ ಮತ್ತೆ ಸಿಎಂ ಆಗಲ್ಲ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಬಿಎಸ್ ಯಡಿಯೂರಪ್ಪ ಭೇಟಿಯನ್ನು ಟೀಕಿಸಿದರು. ಚೆನ್ನಾಗಿದ್ದರೆ ಎಲ್ಲರೂ ಜೊತೆಯಲ್ಲಿರುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆ ಆದರೆ ಬಿಟ್ಟು ಬಿಡುತ್ತಾರೆ. ಕೆಟ್ಟ ಘಳಿಗೆ ಬಂದಾಗ ಹಿಂದೇಟು ಹಾಕುವುದು ಬಿಜೆಪಿಗೆ ಸಾಮಾನ್ಯವಾಗಿದ್ದು, ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ. ರೆಡ್ಡಿ ಅವರು ತಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಅಂದರೆ ಯೂ ಟರ್ನ್ ಪಕ್ಷ ಎಂದು ಚಾಟಿ ಬೀಸಿದರು.

ಇದೇ ವೇಳೆ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಹೇಳಿದ ಜಮೀರ್, ಬಿಎಸ್‍ವೈ ಎಷ್ಟೇ ತಿಪ್ಪರಲಾಗ ಹಾಕಿದರೂ ಏನೂ ಮಾಡಲು ಸಾಧ್ಯವಿಲ್ಲ. ಅವರು ಮತ್ತೆ ಮುಖ್ಯಮಂತ್ರಿ ಆಗಲ್ಲ. ಕಳೆದ ಕೆಲ ತಿಂಗಳುಗಳಿಂದ ಯಡಿಯೂರಪ್ಪ ಅವರು ನಿದ್ದೆ ಮಾಡುತ್ತಿಲ್ಲವಂತೆ. ಮುಖ್ಯಮಂತ್ರಿ ಆದೆ ಎಂದು ಕನಸು ಕಾಣುತ್ತಾರಂತೆ. ಕನಸು ಕಾಣುವುದು ತಪ್ಪಲ್ಲ, ಆದರೆ ಹಗಲುಗನಸು ಕಾಣಬೇಡಿ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ರಾಮಮಂದಿರ ನಿರ್ಮಾಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಮಸೀದಿ ಎರಡೂ ನಿರ್ಮಾಣವಾಗಲಿ. ಚುನಾವಣೆ ಬಂದಾಗ ಮಾತ್ರ ಇದು ಪ್ರಚಾರದ ವಿಷಯ ಆಗದಿರಲಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ನಾಲ್ಕೂವರೆ ವರ್ಷದಲ್ಲಿ ಬಿಜೆಪಿ ಅವರಿಗೆ ನೆನಪಿಗೆ ಬಂದಿಲ್ಲ. ಲೋಕಸಭಾ ಚುನಾವಣೆ ಬಂದರೆ ಮಂದಿರ ನೆನಪಾಗುತ್ತೆ. ಮಂದಿರ ಕಟ್ಟೋಕೆ ಮುಸಲ್ಮಾನರ ವಿರೋಧ ಇಲ್ಲ. ನಮಗೆ ಮಂದಿರವೂ ಆಗಬೇಕು, ಮಸೀದಿಯೂ ನಿರ್ಮಾಣ ಆಗಬೇಕು. ಭಾರತ ಸರ್ವ ಧರ್ಮೀಯರೂ ಸಹೋದರರಂತೆ ಬಾಳುವ ದೇಶ. ವಿಶ್ವದಲ್ಲಿ ಇಂತಹ ಇನ್ನೊಂದು ದೇಶ ನೋಡಿಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

 

Comments

Leave a Reply

Your email address will not be published. Required fields are marked *