ಪೂರ್ಣ ಬಹುಮತದೊಂದಿಗೆ ಬಿಎಸ್‍ವೈ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ರಾಜೇಗೌಡ

ಚಿಕ್ಕಮಗಳೂರು: ಅತೃಪ್ತ ಶಾಸಕರೆಲ್ಲಾ ಅನರ್ಹವಾಗಿರೋದು ಬಿಜೆಪಿಗೆ ವರವಾಗಿದ್ದು, ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವ ವೇಳೆ ಯಾವುದೇ ಪಕ್ಷದವರು ಶೇ.51ರಷ್ಟು ಮತ ಹೊಂದಿರಬೇಕು. ಅದನ್ನು ಪಟ್ಟಿ ಸಮೇತ ರಾಜ್ಯಪಾಲರಿಗೆ ತೋರಿಸಬೇಕು. ಅದು ಸಂವಿಧಾನದ ನಿಯಮ ಎಂದು ತಿಳಿಸಿದ್ದಾರೆ.

ಸದನ ಪ್ರಾರಂಭವಾದ ಮೇಲೆ ಯಾರು ಹೆಚ್ಚು ಮತ ಗಳಿಸುತ್ತಾರೋ ಅವರು ವಿಶ್ವಾಸ ಮತ ಗಳಿಸುತ್ತಾರೆ, ಮುಖ್ಯಮಂತ್ರಿಯಾಗುತ್ತಾರೆ. ಆದರೆ, ರಾಜ್ಯಪಾಲರು ಯಡ್ಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವಾಗ ಇವರಿಗೆ ಶೇ.51ರಷ್ಟು ಮತ ಇದೆಯಾ ಎಂದು ಯೋಚಿಸಬೇಕಿತ್ತು. ಆದರೆ, ಅವರು ಕೇಳಿದ ತಕ್ಷಣ ಅವಕಾಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೃಷ್ಟ ಎಂಬಂತೆ ಅತೃಪ್ತರು ಅನರ್ಹವಾಗಿದ್ದಾರೆ. ಈಗ ಅವರಿಗೆ ಅವಕಾಶ ಇದೆ. ಇದನ್ನು ನಾವು ಒಪ್ಪುತ್ತೇವೆ. ಆದರೆ, ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಆಗುವುದಕ್ಕಿಂತ ಮೊದಲೇ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿರೋದು ಸಂವಿಧಾನ ವಿರೋಧ. ರಾಜ್ಯಪಾಲರ ನಡೆ ನಮಗೆ ನೋವು ತಂದಿದೆ. ಸಂವಿಧಾನ ಕಾಪಾಡಬೇಕಾದವರೆ ಅದರ ವಿರುದ್ಧ ನಡೆದುಕೊಂಡಾಗ ಏನಾಗುತ್ತದೆ ಎಂದು ರಾಜ್ಯಪಾಲರ ವಿರುದ್ಧ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *