ಹುಡುಗಿಗೆ ಮೆಸೇಜ್ ಮಾಡಿದನೆಂದು ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ – ಅರೆಬೆತ್ತಲೆ ಮೆರವಣಿಗೆ

ದಾವಣಗೆರೆ: ಯುವತಿಯೊಬ್ಬಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ  ಮೆಸೇಜ್ ಮಾಡಿದ ಎನ್ನುವ ಕಾರಣಕ್ಕೆ ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಹೊಡೆದು, ಅರೆಬೆತ್ತಲೆಯಾಗಿ ಗ್ರಾಮದ ತುಂಬಾ ಮೆರವಣಿಗೆ ಮಾಡಿದ ಅಮಾನುಷ ಘಟನೆ ದಾವಣಗೆರೆ ಜಿಲ್ಲೆ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.

ಗಣೇಶ್ ಹಲ್ಲೆಗೊಳಗಾದ ಯುವಕ. ಗಣೇಶ್ ತುಮಕೂರಿನ ಕಾಲೇಜ್ ಒಂದರಲ್ಲಿ ಮೊದಲನೇ ವರ್ಷದ ಬಿ.ಎ ಪದವಿ ಓದುತ್ತಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಅದೇ ಅತ್ತಿಗೇರೆ ಗ್ರಾಮದ ಯುವತಿ ಪರಿಚಯವಾಗಿ ಪರಸ್ಪರ ಮೆಸೇಜ್ ಮಾಡಿದ್ದಾರೆ. ಆಕೆ ಪಿಯುಸಿ ಓದುತ್ತಿದ್ದೇನೆ ಎಂದು ಹೇಳಿದ್ದಾಳೆ. ಅಲ್ಲದೆ ಕೆಲ ದಿನಗಳ ಕಾಲ ಪರಸ್ಪರ ಮೆಸೇಜ್ ಮಾಡಿದ ನಂತರ ತನ್ನ ಸ್ವಂತ ಗ್ರಾಮದ ಯುವತಿ ಎಂದು ಗೊತ್ತಾದಾಗ ಮೇಲ್ಜಾತಿಯ ಯುವತಿ ಜೊತೆ ನಾನು ಮೆಸೇಜ್ ಮಾಡುವುದು ಸರಿ ಅಲ್ಲ ಎಂದು ಯುವಕ ತಿಳಿದು ಸುಮ್ಮನಾಗಿದ್ದಾನೆ.  ಆ ಬಳಿಕ ಕಳೆದ ನಾಲ್ಕು ದಿನದ ಹಿಂದೆ ಅತ್ತಿಗೆರೆ ರೇಣುಕಮ್ಮ ದಂಪತಿ ಪುತ್ರ ಗಣೇಶ್ ಅದೇ ಗ್ರಾಮದ ಯುವತಿಗೆ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ ಹುಡುಗಿಯ ತಂದೆ ಸೇರಿದಂತೆ ಸಾರ್ವಜನಿಕರು ಹುಡುಗನಿಗೆ ಅಮಾನುಷವಾಗಿ ಥಳಿಸಿದ್ದಾರೆ. ಗಣೇಶ್ ಮನೆ ಬಳಿ ಬಂದ ಕೆಲ ಯುವಕರು ಜಮೀನಿನಲ್ಲಿ ಕರೆಂಟ್ ರಿಪೇರಿ ಮಾಡುವ ಕೆಲಸವಿದೆ ಎಂದು ಕರೆದೊಯ್ದಿದ್ದಾರೆ. ಬಳಿಕ ಹುಡುಗಿಯ ಸಂಬಂಧಿಕರು ಹುಡುಗನನ್ನು ಸೀದಾ ಯುವತಿಯ ಮನೆಗೆ ಕರೆಸಿ ಮೇಸೆಜ್ ಮಾಡಿರುವ ಬಗ್ಗೆ ಕೇಳಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಗ್ರಾಮದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ ಊರಿನ ದೇವಸ್ಥಾನ ಬಳಿ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಇದನ್ನೂ ಓದಿ: ಮೊಬೈಲ್ ಜಾಸ್ತಿ ನೋಡಬೇಡ ಅಂತ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ

ದೇವಸ್ಥಾನದ ಬಳಿ ಕಂಬಕ್ಕೆ ಕಟ್ಟಿಹಾಕಿದ್ದಾರೆ ಎಂಬ ವಿಷಯ ಗೊತ್ತಾದ ತಕ್ಷಣ ಗಣೇಶ್‍ನ ತಾಯಿ ರೇಣುಕಮ್ಮ ದೇವಸ್ಥಾನದ ಬಳಿ ಹೋಗಿ ಮಗನಿಗೆ ಹೊಡೆಯುವುದನ್ನು ನೋಡಲಾಗದೇ ಹೊಡಿಬೇಡಿ ಎಂದು ಅತ್ತು ಬೇಡಿಕೊಂಡರು. ಈ ವೇಳೆ ನೀಚರು ರೇಣುಕಮ್ಮನನ್ನು ಎಳೆದು ಬೀಸಾಕಿದ್ದಾರೆ. ಮಗನ ಬೆನ್ನಿಗೆ ತಾಯಿ ನಿಂತರು ಯಾರು ಆ ತಾಯಿ ಕೂಗು ಕೇಳಿಸಿಕೊಂಡಿಲ್ಲ. ನನ್ನ ಮಗ ತಪ್ಪು ಮಾಡಿದ್ದರೆ ಪೊಲೀಸ್ ಠಾಣೆಗೆ ಒಪ್ಪಿಸಿ ಎಂದು ಪರಿಪರಿಯಾಗಿ ಮನವಿ ಮಾಡಿದ್ರು ಕೇಳಿಸಿಕೊಳ್ಳದೇ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಮಗಳಿಗಾಗಿ 36 ವರ್ಷ ಪುರುಷನ ವೇಷದಲ್ಲಿದ್ದ ತಾಯಿ

ತೀವ್ರ ಹಲ್ಲೆಗೊಳಗಾದ ಗಣೇಶ್ ಕುಡಿಯಲು ನೀರು ಕೇಳಿದಾಗ ನೀರು ಕೊಟ್ಟಿಲ್ಲ. ಕೊನೆಗೆ ಅಲ್ಲೇ ಚೌಟರಿಯೊಂದರ ಕತ್ತಲ ಕೋಣೆಯಲ್ಲಿ ಗಣೇಶ್‍ನನ್ನು ಕೂಡಿ ಹಾಕಿದ್ದಾರೆ. ಇನ್ನೇನು ಅವರು ಬಿಡುವುದಿಲ್ಲವೆಂದು ಅರಿತ ರೇಣುಕಮ್ಮ ಚೌಟರಿಯಲ್ಲಿ ಮಗನ ಜೊತೆ ಮಲಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ್ದ ಗಣೇಶ್ ಮೇಲ್ವರ್ಗದ ಯುವತಿಗೆ ಮೆಸೇಜ್ ಮಾಡಿ ಟಾರ್ಚರ್ ಕೊಟ್ಟಿದ್ದಾನೆ ಎಂಬುದನ್ನು ಟಾರ್ಗೆಟ್ ಮಾಡಿಕೊಂಡು ಸಿಕ್ಕಸಿಕ್ಕವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕವಾಗಿ ಅರೆಬೆತ್ತಲೆಗೊಳಿಸಿದ್ದರಿಂದ ಮಾನಸಿಕವಾಗಿ ಯುವಕ ಘಾಸಿಯಾಗಿದ್ದಾನೆ. ಕೈ ಕಾಲು ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದು ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಗಣೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹುಡುಗಿಯೇ ಮೊದಲು ಮೆಸೇಜ್ ಮಾಡಿದ್ದು ಎಂದು ಗಣೇಶ್ ಆರೋಪಿಸಿದ್ದು, ಗಣೇಶ್ ಪೋಷಕರು ದಾವಣಗೆರೆ ಜಿಲ್ಲೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ಮಾಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣ ಸಂಬಂಧ ಓರ್ವ ಆರೋಪಿ ಅರೆಸ್ಟ್ ಆಗಿದ್ದಾನೆ.

Comments

Leave a Reply

Your email address will not be published. Required fields are marked *