ಸೋದರಿ, ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧ- ಕಣ್ಣಾರೆ ನೋಡಿದ ತಮ್ಮನ ಕತ್ತು ಸೀಳಿದ

ಚೆನ್ನೈ: ಸಹೋದರಿ ಮತ್ತು ಚಿಕ್ಕಮ್ಮನ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ನೋಡಿದ ತಮ್ಮನನ್ನೇ ಸಹೋದರ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.

ಶಿವಕುಮಾರ್ (15) ಹತ್ಯೆಯಾದ ಬಾಲಕ. ಸಹೋದರ ಶರತ್ ಕುಮಾರ್ (21) ಕೊಲೆ ಮಾಡಿದ್ದು, ಈ ಪ್ರಕರಣ ಸಂಬಂಧ ಆರೋಪಿಗಳಾದ ಶರತ್ ಕುಮಾರ್, ಸಹೋದರಿ ಸೌಂದರ್ಯ (18) ಹಾಗೂ ಚಿಕ್ಕಮ್ಮ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಮೃತ ಶಿವಕುಮಾರ್ ಉಲುಂದುರ್ಪೇಟ್‍ನ ಎಲವನ್‍ಸುರ್ಕೋಟೈನಲ್ಲಿರುವ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದನು. ಈತ ತನ್ನ ತಾಯಿ, ಅಣ್ಣ ಶರತ್ ಕುಮಾರ್ ಮತ್ತು ಸಹೋದರಿ ಸೌಂದರ್ಯ ಜೊತೆ ವಾಸಿಸುತ್ತಿದ್ದನು. ಇವರು ಕೃಷಿ ಕಾರ್ಮಿಕರಾಗಿದ್ದು, ಈತನ ತಂದೆ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜುಲೈ 28 ಭಾನುವಾರ ಶಿವಕುಮಾರ್ ನಾಪತ್ತೆಯಾಗಿದ್ದನು. ಆದರೆ ಅದೇ ದಿನ ರಾತ್ರಿ ಅರಣ್ಯ ಪ್ರದೇಶವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶಿವಕುಮಾರ್ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಶುರುಮಾಡಿದ್ದರು.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಶ್ವಾನವನ್ನು ಕರೆದುಕೊಂಡು ಹೋಗಿ ವಾಸನೆಯಿಂದ ಪತ್ತೆಮಾಡಲು ಯತ್ನಿಸಿದ್ದಾರೆ. ಆಗ ಪೊಲೀಸ್ ಶ್ವಾನ ಮೃತ ಬಾಲಕನ ಮನೆಗೆ ಹೋಗಿದೆ. ಮನೆಯಲ್ಲಿ ಪರಿಶೀಲಿಸಿದಾಗ ಒಂದು ಕುಡುಗೋಲು ಕಂಡು ಬಂದಿದೆ. ಆ ಕುಡುಗೋಲಲ್ಲಿ ರಕ್ತದ ವಾಸನೆ ಬರುತ್ತಿತ್ತು. ಹೀಗಾಗಿ ಹುಡುಗನನ್ನು ಕೊಲೆ ಮಾಡಲು ಇದನ್ನು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಕ್ಷಣ ಪೊಲೀಸರು ಅನುಮಾನದ ಮೇರೆಗೆ ಮೃತ ಹುಡುಗನ ಸಹೋದರ ಶರತ್‌ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾನೇ ಸಹೋದರನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಶರತ್‌ಕುಮಾರ್‌ಗೆ ತನ್ನ ಸ್ವಂತ ಸಹೋದರಿ ಮತ್ತು ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದನು. ಒಂದು ದಿನ ಮೃತ ಶಿವಕುಮಾರ್ ಅವರ ಅಕ್ರಮ ಸಂಬಂಧವನ್ನು ನೋಡಿದ್ದಾನೆ. ಇದರಿಂದ ಶರತ್‍ಕುಮಾರ್ ತಮ್ಮ ಇತರರಿಗೆ ಹೇಳುತ್ತಾನೆ ಎಂದು ಭಯಗೊಂಡಿದ್ದಾನೆ. ಇದರಿಂದ ತಮ್ಮನನ್ನೇ ಕೊಲೆ ಮಾಡಲು ನಿರ್ಧರಿಸಿದ್ದನು. ಅದರಂತೆಯೇ ಭಾನುವಾರ ಶರತ್‌ಕುಮಾರ್‌ನನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಮೊಲದ ಬೇಟೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕುಡುಗೋಲು ಬಳಸಿ ಆರೋಪಿ ಶರತ್‍ಕುಮಾರ್ ತಮ್ಮನ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿ ಮನೆಗೆ ಬಂದು ತಾಯಿ ಮಗ ಶಿವನನ್ನು ಹುಡುಕುತ್ತಿದ್ದಾಗ ಆತ ಮೊಲದ ಬೇಟೆಗೆ ಹೋಗಿದ್ದಾನೆ ಎಂದು ಹೇಳಿದ್ದಾನೆ. ಕೊನೆಗೆ ತಮ್ಮನ ಮೃತದೇಹ ಸಿಕ್ಕಿದಾಗ ಸಂಬಂಧಿಕರೊಂದಿಗೆ ಸೇರಿಕೊಂಡರು ಆರೋಪಿ ಅಳುವ ನಾಟಕವಾಡಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *