ಆರ್‌ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ – ವಾಹನ ಓಡಿಸಲು ಬರದಿದ್ರೂ ಸಿಗುತ್ತೆ ಲೈಸೆನ್ಸ್.!

ಬೆಂಗಳೂರು: ದೇಶಾದ್ಯಂತ ಇರುವ ಆರ್‌ಟಿಓ ಕಚೇರಿಗಳನ್ನು ಕೇಂದ್ರ ಸರ್ಕಾರ ಡಿಜಿಟಲೀಕರಣಗೊಳಿಸಿ ಪಾರದರ್ಶಕ ಮಾಡುತ್ತಿದೆ. ಇಲ್ಲಿನ ಆರ್‌ಟಿಓ ಕಚೇರಿಯನ್ನು ಅಧಿಕಾರಿಗಳು ಬ್ರೋಕರ್ ಗಳ ಜೊತೆ ಶಾಮೀಲಾಗಿ ಹಣಮಾಡುವ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ವಾಹನ ಓಡಿಸಲು ಬರದಿದ್ದರೂ ಆರ್‌ಟಿಓ ಕಚೇರಿಯಲ್ಲಿ ಹಣ ಕೊಟ್ಟರೆ ಬ್ರೋಕರ್ ಗಳ ಮೂಲಕ ನೇರವಾಗಿ ಲೈಸೆನ್ಸ್ ಮನೆಗೆ ಬರುತ್ತದೆ.

ಹೌದು..ಬೆಂಗಳೂರು ಹೊರವಲಯ ಆನೇಕಲ್‍ನ ಆರ್ ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳಿಲ್ಲದೇ ಯಾವ ಕೆಲಸನೂ ನಡೆಯಲ್ಲ. ಇಲ್ಲಿನ ಅಧಿಕಾರಿಗಳು ಕಚೇರಿ ಟೈಮಿಂಗ್ಸ್ ಮಧ್ಯಾಹ್ನ 12 ಗಂಟೆಯಾಗಿದೆ. ಇದು ಸರ್ಕಾರದ ಸಮಯ ಅಲ್ಲ. ಬದಲಿಗೆ ಅವರೇ ಮಾಡಿಕೊಂಡಿರೋ ಟೈಮಿಂಗ್. ಹೀಗಾಗಿ ವಾಹನಗಳ ಲೈಸೆನ್ಸ್, ಎಫ್‍ಸಿ, ಇನ್ಷೂರೆನ್ಸ್ ಸೇರಿ ಹಲವು ಕೆಲಸಗಳಿಗೆ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಆನ್‍ಲೈನ್ ಮೂಲಕ ಅರ್ಜಿ ಹಾಕಿದ್ದರೂ ಇಲ್ಲಿನ ಅಧಿಕಾರಿಗಳು ಕೆಲಸ ಮಾಡಿಕೊಡದೆ ದಲ್ಲಾಳಿಗಳ ಜೊತೆ ಶಾಮೀಲಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ಪುರುಷೋತ್ತಮ್ ಹೇಳಿದ್ದಾರೆ.

ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ ಆನೇಕಲ್-ಚಂದಾಪುರ ರಸ್ತೆಯ ಬ್ಯಾಗಡೆದೇನಹಳ್ಳಿ ಬಳಿ ಆರ್‌ಟಿಓ ಕಚೇರಿ ನಿರ್ಮಾಣ ಮಾಡಿದ್ದರು. ಇಲ್ಲಿನ ಟ್ರ್ಯಾಕ್‍ನಲ್ಲಿ ವಾಹನ ಓಡಿಸಿ ಲೈಸೆನ್ಸ್ ಪಡೆಯಬೇಕು. ಆದರೆ ಹಣ ಕೊಟ್ಟರೆ ಟ್ರ್ಯಾಕ್‍ನಲ್ಲಿ ವಾಹನ ಓಡಿಸೋ ಅವಶ್ಯಕತೆನೇ ಇಲ್ಲ. ಮನೆ ಬಾಗಿಲಿಗೆ ಲೈಸೆನ್ಸ್ ಬರುತ್ತೆ, ಹಣ ನೀಡದಿದ್ದರೆ ತಿಂಗಳುಗಟ್ಟಲೆ ಲೈಸೆನ್ಸ್ ಗಾಗಿ ಅಲೆಸುತ್ತಾರೆ ಇಲ್ಲಿನ ಅಧಿಕಾರಿಗಳು ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ಆರೋಪಿಸುತ್ತಾರೆ.

ಹಣದ ಆಸೆಗೆ ಬ್ರೋಕರ್ ಗಳ ಜೊತೆ ಶಾಮಿಲಾಗಿರುವ ಆರ್‌ಟಿಓ ಅಧಿಕಾರಿಗಳ ವಿರುದ್ಧ ಸಾರಿಗೆ ಸಚಿವರು ಕೂಡಲೇ ಕ್ರಮ ಜರುಗಿಸಬೇಕು. ಜೊತೆಗೆ ಇಲ್ಲಿನ ಬ್ರೋಕರ್ ಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *