ಬ್ರಿಟಿಷರಿಗೆ ಧನ್ಯವಾದ ಹೇಳಿದ್ದಕ್ಕೆ ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

ಬೆಂಗಳೂರು: ಬ್ರಿಟಿಷರಿಗೆ ಧನ್ಯವಾದ ಹೇಳಿದ ಘಟನೆ ಇಂದು ವಿಧಾನ ಪರಿಷತ್‍ನ ಕಲಾಪದಲ್ಲಿ ನಡೆಯಿತು. ಸಂವಿಧಾನದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಬ್ರಿಟಿಷರಿಗೆ ಧನ್ಯವಾದ ಹೇಳಿದರು. ಬ್ರಿಟಿಷರ ಕಾಲದಲ್ಲೂ ಒಳ್ಳೆ ಕೆಲಸ ಆಗಿದೆ. ಬ್ರಿಟಿಷರ ಆಳ್ವಿಕೆ ಚೆನ್ನಾಗಿತ್ತು ಎಂದು ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಪ್ರಬಲ ವಿರೋಧ ವ್ಯಕ್ತಪಡಿಸಿದರು.

ಬಿಜೆಪಿಯ ಪ್ರಾಣೇಶ್ ರಮೇಶ್ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ನಮ್ಮ ದೇಶದ ಮೇಲೆ ಬ್ರಿಟಿಷರು ದೌರ್ಜನ್ಯ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೀರಾ ಅಂತ ರಮೇಶ್ ವಿರುದ್ಧ ಕಿಡಿಕಾರಿದರು. ಹೀಗೆ ಧನ್ಯವಾದ ಹೇಳಲು ಗಾಂಧಿಜೀ ಅವರು ಸ್ವಾತಂತ್ರ್ಯ ತಂದು ಕೊಡಬೇಕಾಯ್ತಾ? ನಾಚಿಕೆ ಆಗಬೇಕು ಅಂತ ಪಿ.ಆರ್ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಾಣೇಶ್ ಮಾತಿಗೆ ಸಚಿವ ಸಿಟಿ ರವಿ ಬೆಂಬಲ ವ್ಯಕ್ತಪಡಿಸಿದರು. ಬ್ರಿಟಿಷರನ್ನ ಹೊಗೊಳೋಕೆ ನಾಚಿಕೆ ಆಗಬೇಕು. ದೇಶವನ್ನು ಲೂಟಿ ಮಾಡಿ, ದಾಸ್ಯದಿಂದ ಭಾರತೀಯರನ್ನ ನಡೆಸಿಕೊಂಡವರು ಬ್ರಿಟಿಷರು. ಬ್ರಿಟಿಷರಿಗೆ ಧನ್ಯವಾದ ಹೇಳೋದಾದ್ರೆ ವಿಧಾನ ಪರಿಷತ್ ನಲ್ಲಿ ಇರೋ ಗಾಂಧಿಜೀ ಫೋಟೋ ತೆಗೆದು ಲಾರ್ಡ್ ಮೆಕಾಲೆ ಫೋಟೋ ಹಾಕಿ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಸದಸ್ಯರು ರಮೇಶ್ ಹೇಳಿದ ಅರ್ಥ ಹಾಗಲ್ಲ. ಅವರು ಹೇಳಿದ್ದು ಬೇರೆ ಅರ್ಥದಲ್ಲಿ ಎಂದ ಕಾಂಗ್ರೆಸ್ ಸದಸ್ಯರು. ಕಾಂಗ್ರೆಸ್ ಸದಸ್ಯರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಪಿ.ಆರ್ ರಮೇಶ್ ಕ್ಷಮೆ ಕೇಳಬೇಕು ಅಂತ ಒತ್ತಾಯ ಮಾಡಿದರು. ಈ ವೇಳೆ ಸದನದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಸದಸ್ಯರ ವಿರೋಧದ ಬಳಿಕ ತಮ್ಮ ಹೇಳಿಕೆ ಕುರಿತು ಪಿ.ಆರ್ ರಮೇಶ್ ವಿವರಣೆ ನೀಡಿದರು. ಬ್ರಿಟಿಷರು ಹಿಂದೆ ರಾಜರ ಮಧ್ಯೆ ದ್ವೇಷ ತಂದಿಟ್ಟು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಅ ಕಾಲದಲ್ಲಿ ಅವ್ರು ವಿಷ ಬೀಜ ಬಿತ್ತಿ ನಂತರ ಸ್ವಾತಂತ್ರ್ಯ ನಮಗೆ ಅಮೃತ ತಂದು ಕೊಟ್ಟಿತ್ತು. ಸ್ವಾತಂತ್ರ್ಯ ಎಂಬ ಅಮೃತ ತಂದು ಕೊಟ್ಟಿದ್ದಕ್ಕೆ ಅವ್ರಿಗೆ ಧನ್ಯವಾದ ಎಂದು ಹೇಳಿದೆ ಅಷ್ಟೆ ಎಂದು ವಿವಾದದ ಮಾತಿಗೆ ರಮೇಶ್ ಅಂತ್ಯ ಹಾಡಿದರು.

Comments

Leave a Reply

Your email address will not be published. Required fields are marked *