ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

ತಿರುವನಂತಪುರಂ: ವಿಶ್ವದ ಅತ್ಯಂತ ದುಬಾರಿ ವಿಮಾನ ಬ್ರಿಟಿಷ್ ರಾಯಲ್ ನೇವಿಯ ಎಫ್-35 ಫೈಟರ್ ಜೆಟ್‌ ಒಂದು ತಿಂಗಳ ನಂತರ ಕೇರಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದೆ.

ತುರ್ತು ಲ್ಯಾಂಡಿಂಗ್ ಮಾಡಿದ ಒಂದು ತಿಂಗಳ ನಂತರ, ಬ್ರಿಟಿಷ್ ರಾಯಲ್ ನೇವಿಯ F-35B ಜೆಟ್ ಬೆಳಿಗ್ಗೆ 10:50 ಕ್ಕೆ ಟೇಕಾಫ್‌ ಆಗಿದೆ. ಆಸ್ಟ್ರೇಲಿಯಾದ ಡಾರ್ವಿನ್‌ಗೆ ಜೆಟ್ ಹಾರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ F-35B ವಿಮಾನ ದುರಸ್ತಿ ಪೂರ್ಣ – ಮಂಗಳವಾರ ಯುಕೆಗೆ ವಾಪಸ್

ಕಳೆದ 5 ವಾರಗಳಿಂದ ಕೇರಳದ ತಿರುವನಂತಪುರ ಏರ್‌ಪೋರ್ಟ್‌ನಲ್ಲಿದ್ದ (Thiruvananthapuram International Airport) ವಿಮಾನವನ್ನು ನಿಲ್ಲಿಸಲಾಗಿತ್ತು. ಯುದ್ಧ ವಿಮಾನದ ಹೈಡ್ರಾಲಿಕ್ ಸಿಸ್ಟಮ್‌ನ ದೋಷದಿಂದ ವಿಮಾನವನ್ನು ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಬ್ರಿಟನ್ ಇಂಜಿನಿಯರುಗಳ ತಂಡ ಈ ದೋಷವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಅಮೆರಿಕ ನಿರ್ಮಿತ, ಅತ್ಯಂತ ಅತ್ಯಾಧುನಿಕ ಫೈಟರ್ ಜೆಟ್ ವಿದೇಶದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲು. ಇದು ರಾಯಲ್ ನೇವಿ ವಿಮಾನವಾಹಕ ನೌಕೆ HMS ಪ್ರಿನ್ಸ್ ಆಫ್ ವೇಲ್ಸ್‌ನ ಭಾಗವಾಗಿದೆ. ಈ ವಿಮಾನವಾಹಕ ನೌಕೆ ಕೆಲ ದಿನಗಳ ಹಿಂದೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿಯಾಗಿ ತಾಲೀಮು ನಡೆಸಿತ್ತು.

ಇಷ್ಟು ದಿನ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತಂಗಿದ್ದ ವಿಮಾನಕ್ಕೆ, ಅದರ ತೂಕವನ್ನು ಆಧರಿಸಿ ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ವರದಿಯಾಗಿದೆ. ಇನ್ನೂ, ಭಾರತೀಯ ಅಧಿಕಾರಿಗಳ ನಿರಂತರ ಬೆಂಬಲ ಮತ್ತು ಸಹಕಾರಕ್ಕಾಗಿ ಬ್ರಿಟಿಷ್ ಹೈಕಮಿಷನ್ ಧನ್ಯವಾದ ತಿಳಿಸಿದೆ. ಇದನ್ನೂ ಓದಿ: ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌