ಭದ್ರೆಯ ಭಯದಲ್ಲಿ ಸಾಗುತ್ತಿದೆ ಮಲೆನಾಡಿಗರ ಬದುಕು

ಚಿಕ್ಕಮಗಳೂರು: ಸೇತುವೆ ಸಂಪರ್ಕ ಕಡಿತಗೊಂಡು ಜನರು ಭಯದಿಂದ ತೆಪ್ಪದಲ್ಲಿ ಸಾಗುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ-ಬಾಳೆಗದ್ದೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಆಶ್ಲೇಷ ಮಳೆ ಹಾಗೂ ಭದ್ರೆ ನದಿಯಿಂದ ಹಾಳಾಗಿ ಹೋಗಿದೆ. ಇದೀಗ ಬಾಳೆಗದ್ದೆ ಗ್ರಾಮದ 70-80 ಮನೆ ಹಾಗೂ 200 ಜನ ನಗರಕ್ಕೆ ಬರಲು ತೆಪ್ಪವನ್ನು ಆಶ್ರಯಿಸಿದ್ದಾರೆ. 10 ವರ್ಷಗಳ ಹಿಂದೆ ತೆಪ್ಪದಲ್ಲಿ ಸಾಗುವಾಗ ತೆಪ್ಪ ಮಗುಚಿ ಮೂವರು ಮೃತಪಟ್ಟಿದ್ದರು.

ಅಂದು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಇದಾಗಿದ್ದು, ರಾಜ್ಯದ ಅತಿ ದೊಡ್ಡ ಎರಡನೇ ಸೇತುವೆ ಕೂಡ ಆಗಿದೆ. ಆದರೆ ಇಂದು ಭದ್ರೆಯ ಅಬ್ಬರಕ್ಕೆ ಮುರಿದು ಬಿದ್ದು ಮತ್ತೊಂದು ಅನಾಹುತಕ್ಕೆ ಆಹ್ವಾನ ನೀಡಿದಂತಿದೆ. ಕೂಡಲೇ ಸರ್ಕಾರ ಇಲ್ಲಿಗೆ ಆದಷ್ಟು ಬೇಗ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಿವಾಸಿಗಳು ಮತ್ತೆ ತೆಪ್ಪದ ಮೊರೆ ಹೋಗಿದ್ದಾರೆ. ಎಲ್‍ಕೆಜಿಯಿಂದ ಡಿಗ್ರಿ ಓದುವ ಮಕ್ಕಳು ಕೂಡ ಇದೇ ತೆಪ್ಪದಲ್ಲಿ ಶಾಲೆಗೆ ಹೋಗಿಬರಬೇಕು. ಹೆತ್ತವರು ದಿನ ಬಂದು ತೆಪ್ಪದಲ್ಲಿ ಮಕ್ಕಳನ್ನು ಸಾಗಿಸಿ ಹೋಗುತ್ತಿದ್ದಾರೆ. ಬಾಳೆಗದ್ದೆ ಗ್ರಾಮದಿಂದ ಬೇರೆ ಮಾರ್ಗವಿದ್ದರೂ ಅದು, 12-15 ಕಿ.ಮೀ. ದೂರವಾಗುತ್ತದೆ ಅಲ್ಲದೆ ದಟ್ಟಕಾನನದೊಳಗೆ ಹೋಗಬೇಕಾಗುತ್ತದೆ. ಅಲ್ಲಿ 24 ಗಂಟೆಯೂ ದಾರಿ ಮಧ್ಯೆ ಹುಲಿ, ಆನೆ, ಕಾಡುಕೋಣ ಸೇರಿದಂತೆ ಎಲ್ಲಾ ಪ್ರಾಣಿಗಳು ಇರುತ್ತದೆ. ಜನ ಓಡಾಡೋದಕ್ಕೆ ಅಸಾಧ್ಯ. ಹಾಗಾಗಿ ಜನ ಅನಿವಾರ್ಯವಾಗಿ ಜೀವದ ಹಂಗು ತೊರೆದು ತೆಪ್ಪದಲ್ಲಿ ಬದುಕು ದೂಡುತ್ತಿದ್ದಾರೆ.

ಅಂದು 50 ಲಕ್ಷದಲ್ಲಿ ಮುಗಿದಿದ್ದ ಈ ಸೇತುವೆಗೆ ಇಂದು 1.20 ಲಕ್ಷ ಬೇಕಾಗಿದೆ. ಸದ್ಯಕ್ಕೆ ಅರಣ್ಯ ಸಿಬ್ಬಂದಿಗಳು ಇದೇ ಜಾಗದಲ್ಲಿ ಸ್ಥಳೀಯರ ನೆರವಿಗೆ ಬಂದಿದ್ದಾರೆ. ಸ್ಥಳಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ, ಸೇತುವೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದರೆ ಜನ ಸೇತುವೆ ಮುಂದಿನ ಮಳೆಗಾಲಕ್ಕೆಲ್ಲ ತುರ್ತಾಗಿ ನಿರ್ಮಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *