ನಿದ್ದೆ ಮಾತ್ರೆ ಹಾಕಿ, ಚಿನ್ನ, ಹಣ ದೋಚಿ ಪರಾರಿಯಾದ ವಧು

– ಬೆಳಗ್ಗೆ ಎದ್ದು ನೋಡಿದಾಗ ಮನೆಮಂದಿಯೆಲ್ಲ ಶಾಕ್

ಲಕ್ನೋ: ನವವಿವಾಹಿತೆ ಮನೆ ಮಂದಿಗೆಲ್ಲ ನಿದ್ದೆ ಔಷಧಿ ನೀಡಿ ಮಾವನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಹೊತ್ತು ಪರಾರಿಯಾಗಿದ್ದಾಳೆ.

ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯ ಚೋಟಾ ಪಾರಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಬೆಳಗ್ಗೆ ಮನೆ ಮಂದಿಗೆಲ್ಲ ಎಚ್ಚರವಾದ ನಂತರ ಮನೆಯಲ್ಲಿ ಚಿನ್ನಾಭರಣ, ಹಣ ಹಾಗೂ ಇತರೆ ಬೆಲೆ ಬಾಳವ ವಸ್ತುಗಳು ಕಾಣದಿರುವುದನ್ನು ಕಂಡು ದಂಗಾಗಿದ್ದಾರೆ.

ಈ ಕುರಿತು ಎಸ್‍ಪಿ ಜಿತೇಂದ್ರ ಕುಮಾರ್ ಶ್ರೀವಾಸ್ತವ್ ಮಾಹಿತಿ ನೀಡಿ, ಪ್ರವೀಣ್ ಮತ್ತು ರೈ ಡಿಸೆಂಬರ್ 9ರಂದು ಮದುವೆಯಾಗಿದ್ದಾರೆ. ಮಹಿಳೆಯು ಅಜಂಗಢಗೆ ಸೇರಿದವಳಾಗಿದ್ದಾಳೆ. ಸುಮಾರು 70 ಸಾವಿರ ರೂ. ನಗದು, ಮೂರು ಲಕ್ಷ ರೂ. ಬೆಲೆಯ ಆಭರಣಗಳನ್ನು ಮಹಿಳೆ ಹೊತ್ತೊಯ್ದಿದ್ದಾಳೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಇದೀಗ ಮದುವೆ ಮಾಡಿಸಿದ ಮಧ್ಯವರ್ತಿ ಟಿಂಕುಗಾಗಿ ಹುಡುಕಾಟ ನಡೆಸಿದ್ದಾರೆ. ಮದುವೆ ನಂತರ ಟಿಂಕು ವಧುವಿನೊಂದಿಗೆ ಹೊಸ ಮನೆಗೆ ಹೋಗಿದ್ದ. ಆಗ ವಧುವಿನೊಂದಿಗೆ ಇವನೂ ಸಹ ಕಾಣೆಯಾಗಿದ್ದಾನೆ.

ವರನ ತಂದೆ ರಾಮ್ ಲೆಡೆಟೆ ಈ ಕುರಿತು ಮಾಹಿತಿ ನೀಡಿ, ಪ್ರವೀಣ್ ಮದುವೆ ಸಂದರ್ಭದಲ್ಲಿ ನಾವು ಒಟ್ಟು ನಾಲ್ಕು ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇವೆ. ಮದುವೆಯನ್ನು ಅಜಂಗಢನಲ್ಲಿ ನಡೆಸಿದ್ದೆವು. ಆಗ ಟಿಂಕು ಸ್ವಲ್ಪ ಹಣವನ್ನು ತೆಗೆದುಕೊಂಡಿದ್ದ ಎಂದು ವಿವರಿಸಿದ್ದಾರೆ.

ವರ ಪ್ರವೀಣ್ ಈ ಕುರಿತು ಪ್ರತಿಕ್ರಿಯಿಸಿ, ಪತ್ನಿ ಈ ರೀತಿಯಾಗಿ ನನಗೆ ಮೋಸ ಮಾಡುತ್ತಾಳೆ ಎಂದು ನನಗೆ ತಿಳಿದಿರಲಿಲ್ಲ. ಹಳ್ಳಿಯಲ್ಲಿ ನನ್ನ ಕುಟುಂಬವು ತುಂಬಾ ಮುಜುಗರಕ್ಕೊಳಗಾಗಿದೆ. ಅಲ್ಲದೆ ಆರ್ಥಿಕವಾಗಿ ಸಹ ನಾವು ಹಿಂದುಳಿದಿದ್ದೇವೆ. ಅವಳನ್ನು ಬಂಧಿಸಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *