ಶವಪೆಟ್ಟಿಗೆಯಲ್ಲಿ ಮದುವೆ ಹಾಲ್‍ಗೆ ಬಂದ ವಧು: ವಿಡಿಯೋ

ಜೀವನದಲ್ಲಿ ಮದುವೆಯ ದಿನವು ಅತ್ಯಂತ ವಿಶೇಷವಾದ ದಿನಗಳಲ್ಲಿ ಒಂದಾಗಿರುತ್ತದೆ. ಮದುವೆಯನ್ನು ಹೆಚ್ಚು ವಿಶೇಷವಾಗಿಸಲು ಅನೇಕರು ಉತ್ಸುಕರಾಗಿರುತ್ತಾರೆ. ಆದರೆ ವಧು ಒಬ್ಬಳು ಶವಪೆಟ್ಟಿಯಲ್ಲಿ ಮದುವೆ ಹಾಲ್‍ಗೆ ಬಂದ ಅಚ್ಚರಿ ಮೂಡಿಸಿದ್ದಾಳೆ.

ಈ ವಿಚಿತ್ರ ಪ್ರಸಂಗ ಎಲ್ಲಿ ಹಾಗೂ ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಟ್ವಿಟರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲ ನೆಟ್ಟಿಗರು ದಿಗ್ಭ್ರಮೆಗೊಂಡರೆ, ಇತರರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಮದುವೆ ಹಾಲ್‍ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಶವಪೆಟ್ಟಿಗೆ ಮೇಲೆ ಹೊದಿಸಿದ್ದ ಕಪ್ಪು ಬಟ್ಟೆ ತೆಗೆಯುತ್ತಾನೆ. ಬಳಿಕ ಶವಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಗೋಲ್ಡನ್ ಗೌನ್ ಧರಿಸಿ ಮಲಗಿದ್ದ ವಧು ಡ್ಯಾನ್ಸ್ ಮಾಡುತ್ತಾ ಮೇಲೆಳುತ್ತಾಳೆ. ಈ ವೇಳೆ ಹಾಲ್ ನಲ್ಲಿ ಸೇರಿದ್ದ ಜನರು ವಧುವನ್ನ ಹುರಿದುಂಬಿಸುತ್ತಾರೆ. ನಗುತ್ತಲೇ ಶವಪೆಟ್ಟಿಗೆಯಿಂದ ವಧು ಹೊರ ಬಂದ ದೃಶ್ಯವನ್ನು ಕೆಲವರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ಇದು ಅವಳ ಮದುವೆಯೋ? ಅಂತ್ಯಸಂಸ್ಕಾರವೋ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಮತ್ತೊಬ್ಬರು ವಿಡಿಯೋ ರಿಟ್ವೀಟ್ ಮಾಡಿ, ಒಂದು ವೇಳೆ ನಾನು ಮದುವೆ ಹಾಲ್‍ನಲ್ಲಿ ಇದ್ದಿದ್ದರೆ ಅಥವಾ ನಾನೇ ವರನಾಗಿದ್ದರೆ ಅಲ್ಲಿಂದ ಓಡಿ ಹೋಗುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *