ನಾಳೆ ಸಂಜೆ ಐದು ಗಂಟೆಗೆ ಬ್ರೇಕಿಂಗ್ ನ್ಯೂಸ್ ನೀಡ್ತಾರೆ ಬಿಎಸ್‍ವೈ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಸಂಜೆ 7 ಗಂಟೆಗೆ ಕುತೂಹಲಕಾರಿ ಟ್ವೀಟ್ ಮಾಡಿ ನಾಳೆ ಸಂಜೆ ಐದು ಗಂಟೆಗೆ ಬ್ರೇಕಿಂಗ್ ಸುದ್ದಿ ನೀಡುವುದಾಗಿ ಹೇಳಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆ ಎಲ್ಲಾ ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದು, ಈ ವೇಳೆ ಬಿಎಸ್‍ವೈ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಈ ಹಿಂದೆ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ಅಥವಾ ಚಾರ್ಜ್ ಶೀಟ್ ಬಿಡುಗಡೆ ಮಾಡುವ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ ಯಾವ ದಿನಾಂಕ ಯಾರ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಟ್ವಿಟ್ಟರ್ ನಲ್ಲಿ ಇದೂವರೆಗೆ ಈ ರೀತಿಯಾಗಿ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ ಎಂದು ಹೇಳಿರಲಿಲ್ಲ. ಹೀಗಾಗಿ ಈಗ ಬಿಎಸ್‍ವೈ ಏನು ಹೇಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಇಂದು ಸಹ ಬಿಎಸ್‍ವೈ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿಯೇ ಆಸರೆ ಎನ್ನುವಂತೆ, ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದ್ದರೂ, ಅನ್ಯಪಕ್ಷಗಳ ಗೆಲುವನ್ನೇ ಸಿದ್ದರಾಮಯ್ಯನವರು ಸಂಭ್ರಮಿಸುವ ಮಟ್ಟಕ್ಕೆ ಇಳಿದಿದ್ದಾರೆ. ಈ ಉಪಚುನಾವಣೆಗಳಲ್ಲಿ ಕೂಡ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‍ಗಳನ್ನೇ ಬಳಸಿರುವುದು ಸಿದ್ದರಾಮಯ್ಯ ಮತ್ತು ಇನ್ನಿತರ ಕಾಂಗ್ರೆಸ್ ನಾಯಕರಿಗೆ ಯಾಕೋ ಕಾಣುತ್ತಿಲ್ಲ. ಬಿಜೆಪಿ ಗೆದ್ದಾಗ ಇ.ವಿ.ಎಂ ಬಗ್ಗೆ ಬೊಬ್ಬೆ ಹೊಡೆಯುವ ಇವರುಗಳು ಈಗ ತಮ್ಮ ನಿಲುವನ್ನು ಜನರಿಗೆ ಸ್ಪಷ್ಟವಾಗಿ ತಿಳಿಸಲಿ ಎಂದಿದ್ದಾರೆ.

#10PercentCM ಸಿದ್ದರಾಮಯ್ಯನವರದ್ದು ‘ಕಮಿಷನ್ ಸರ್ಕಾರ’ ಎಂದು ಇಲ್ಲಿ ತನಕ ಹಲವಾರು ಪುರಾವೆ ಒದಗಿಸಿದ್ದೇವೆ. ಆದರೂ ಸಿಎಂ ಅದೆಲ್ಲಾ ಸುಳ್ಳು ಎಂದು ಪ್ರತಿಪಾದಿಸುತ್ತ ಮತ್ತೆ ಮತ್ತೆ ಹಸಿ ಸುಳ್ಳುಗಳ ಬೇಲಿ ಕಟ್ಟುತ್ತಿದ್ದಾರೆ ಎಂದು ಬರೆದು ವಾಗ್ದಾಳಿ ನಡೆಸಿದ್ದಾರೆ.   ಇದನ್ನೂ ಓದಿ: ವೇದಿಕೆಗಳಲ್ಲಿ ಬಿಎಸ್‍ವೈ ವಿರುದ್ಧ ಅವಹೇಳನಕಾರಿ ಹೇಳಿಕೆ- ಸಿಎಂ ಸೇರಿದಂತೆ ಹಲವು ಮುಖಂಡರಿಗೆ ಹೈಕೋರ್ಟ್ ನೋಟಿಸ್

Comments

Leave a Reply

Your email address will not be published. Required fields are marked *