ವಾಷಿಂಗ್ಟನ್: ಇಬ್ಬರು ಮಹಿಳೆಯರು ಲಕ್ಷಾಂತರ ರೂ. ಮೌಲ್ಯದ ಒಳಉಡುಪನ್ನು ಕದ್ದು ಸಿಕ್ಕಿಬಿದ್ದ ಘಟನೆ ಕ್ಯಾಲಿಫೋರ್ನಿಯಾದ ಫೋಲ್ಸಮ್‍ನಲ್ಲಿರುವ ವಿಕ್ಟೋರಿಯಾಸ್ ಸೀಕ್ರಟ್ ಸ್ಟೋರ್‍ನಲ್ಲಿ ನಡೆದಿದೆ.
ಒಳಉಡುಪನ್ನು ಕದ್ದ ಇಬ್ಬರು ಮಹಿಳೆಯರು ಸಿಬ್ಬಂದಿಯ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಆಗ ತಕ್ಷಣ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚೆತ್ತುಕೊಂಡು ಅವರನ್ನು ಹಿಡಿದು ಬಂಧಿಸಿದ್ದಾರೆ.
ಆರೋಪಿ ಮಹಿಳೆಯರು ಹಲವು ದೊಡ್ಡ ಬ್ಯಾಗ್‍ಗಳಲ್ಲಿ ತುಂಬಿಸಿಕೊಂಡಿದ್ದ ಸುಮಾರು ನೂರಕ್ಕೂ ಹೆಚ್ಚು ಪ್ಯಾಡೆಡ್ ಬ್ರಾಗಳ ಫೋಟೋವನ್ನು ಫೋಲ್ಸಮ್ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಫೋಲ್ಸಮ್ ಪೊಲೀಸರ ಪ್ರಕಾರ ಶುಕ್ರವಾರ ಮಹಿಳೆಯರು ಬ್ಯಾಗಿನಲ್ಲಿ ಒಳಉಡುಪನ್ನು ತುಂಬಿಸಿಕೊಂಡು ಹೋಗುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಈ ಮಹಿಳೆಯರು ಅವರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆ ನಡೆಸಿದ್ದಾರೆ. ಆದರೆ ಇದರಿಂದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ವರದಿಯಾಗಿದೆ.
ಮಹಿಳೆಯರು ಪರಾರಿಯಾಗಲು ಯತ್ನಿಸುವಾಗ ಪೊಲೀಸ್ ಅಧಿಕಾರಿ ಕಾರಿನ ಹತ್ತಿರ ಅವರನ್ನು ತಡೆದಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಕದ್ದ ಒಳಉಡುಪನ್ನು ನೋಡಿ ಅವರನ್ನು ಬಂಧಿಸಿದ್ದಾರೆ.
ಮಹಿಳೆಯರು ಸುಮಾರು 11 ಸಾವಿರ ಡಾಲರ್(ಅಂದಾಜು 7 ಲಕ್ಷ ರೂ.) ಮೌಲ್ಯದ ಬ್ರಾಗಳನ್ನ ಕದ್ದಿದ್ದರು ಎಂದು ವರದಿಯಾಗಿದೆ. ಆರೋಪಿಗಳ ವಿರುದ್ಧ ಕಳ್ಳತನ ಹಾಗೂ ಪಿತೂರಿ ಆರೋಪದಡಿ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಒಬ್ಬಳ ಬಳಿ ನಕಲಿ ನೋಟುಗಳು ಕೂಡ ಪತ್ತೆಯಾಗಿದ್ದು, ಅದರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ವಿಚಾರಣೆ ವೇಳೆ ಈ ಹಿಂದೆಯೂ ಬೇರೆ ಮಳಿಗೆಗಳಿಂದ ಬ್ರಾಗಳನ್ನು ಕದ್ದ ವಿಚಾರವನ್ನು ಆರೋಪಿಗಳು ಬಹಿರಂಗಪಡಿಸಿದ್ದಾರೆ.

Leave a Reply