ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಕೊಲೆ

ಹೈದರಾಬಾದ್: ಪ್ರಿಯಕರ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ತೆಲಂಗಾಣದ ಖಮ್ಮಂ ಜಿಲ್ಲೆಯ ಕೋಥ ಲಂಕಪಲ್ಲಿ ಗ್ರಾಮದಲ್ಲಿ ನಡೆದಿದೆ.

ತೇಜಸ್ವಿನಿ(20) ಕೊಲೆಯಾದ ಯುವತಿ. ತೇಜಸ್ವಿನಿ ಕುಪ್ಪೇನಾಕುಂಟ್ಲಾ ಗ್ರಾಮದವಳಾಗಿದ್ದು, ಆರೋಪಿ ನಿತಿನ್ ಸತ್ತುಪಲ್ಲಿ ಗ್ರಾಮದವನು. ಇಬ್ಬರು ಗಂಗರಾಮ್‍ನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದರು. ಈ ವೇಳೆ ನಿತಿನ್ ಹಾಗೂ ತೇಜಸ್ವಿನಿ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು.

ನಿತಿನ್ ಎಲ್ಲಾ ವಿಷಯಗಳಲ್ಲಿ ಪಾಸ್ ಆದ ನಂತರ ಖಮ್ಮಂನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಕೋರ್ಸ್ ಗೆ ಸೇರಿದ್ದನು. ಇತ್ತ ತೇಜಸ್ವಿನಿ ಮೂರು ವಿಷಯಗಳಲ್ಲಿ ಫೇಲ್ ಆಗಿ ಮನೆಯಲ್ಲಿಯೇ ಇದ್ದಳು. ಈ ನಡುವೆ ತೇಜಸ್ವಿನಿ ತನ್ನ ಸಂಬಂಧಿಕರ ಹುಡುಗನ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂಬ ಅನುಮಾನದಿಂದ ನಿತಿನ್ ಆಕೆಗೆ ಫೋನ್ ಮಾಡಿ ಆಕೆಯ ಜೊತೆ ಜಗಳವಾಡುತ್ತಿದ್ದನು.

ಮಂಗಳವಾರ ನಿತಿನ್ ತನ್ನ ಬೈಕಿನಲ್ಲಿ ಕುಪ್ಪೇನಾಕುಂಟ್ಲಾ ಹೋಗಿ ಮಾತನಾಡಬೇಕೆಂದು ತೇಜಸ್ವಿನಿಗೆ ಮೆಸೇಜ್ ಮಾಡಿದ್ದನು. ನಿತಿನ್ ಮನವಿ ಮಾಡಿಕೊಂಡಿದ್ದ ಕಾರಣ ತೇಜಸ್ವಿನಿ ಆತನನ್ನು ಭೇಟಿ ಮಾಡಲು ಒಪ್ಪಿಕೊಂಡಳು. ಬಳಿಕ ಇಬ್ಬರು ಕುಕ್ಕಲಗುಟ್ಟ ಸಮೀಪವಿರುವ ನಿರ್ಜನ ಪ್ರದೇಶಕ್ಕೆ ಹೋದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ನಿತಿನ್ ಖಮ್ಮಂಗೆ ತಲುಪುವ ಮೊದಲು ಕೆರ್ಚೀಫ್‍ನಿಂದ ತೇಜಸ್ವಿನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ತೇಜಸ್ವಿನಿಯ ಮೃತದೇಹವನ್ನು ಸುಡಲು ನಿತಿನ್ ನಿರ್ಧರಿಸಿದ್ದನು. ಆದರೆ 50 ಮೀ. ದೂರದಲ್ಲಿ ರಾಜ್ಯದ ಹೆದ್ದಾರಿ ಇದ್ದ ಕಾರಣ ನಿತಿನ್ ಆಕೆಯ ಮೃತದೇಹವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಬಳಿಕ ತೇಜಸ್ವಿನಿಯ ತಂದೆ ಸತ್ಯನಾರಾಯಣ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ ತೇಜಸ್ವಿನಿಯ ಮೃತದೇಹ ಪತ್ತೆಯಾಗಿದ್ದು, ನಿತಿನ್‍ನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *