ಕೊಹ್ಲಿಗೆ ಆಟೋಗ್ರಾಫ್ ನೀಡಿದ ಪೋರ: ವಿಡಿಯೋ

ಜಮೈಕಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಅನೇಕ ಅಭಿಮಾನಿಗಳು ಮುಗಿಬೀಳುತ್ತಾರೆ. ಆದರೆ ಪುಟ್ಟ ಪೋರನೊಬ್ಬ ಕೊಹ್ಲಿಗೆ ಆಟೋಗ್ರಾಫ್ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ.

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟಿ-20, ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲು ಸಾಧಿಸಿದೆ. ಟೀಂ ಇಂಡಿಯಾ ಮಂಗಳವಾರ ಜಮೈಕಾದಿಂದ ತವರಿಗೆ ವಾಪಸ್ ಆಗುತ್ತಿದ್ದಾಗ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಮಕ್ಕಳು ಸುತ್ತುವರಿದಿದ್ದರು. ಇದೇ ವೇಳೆ ಅಲ್ಲಿಗೆ ಪೆನ್ನು, ಪೇಪರ್ ಹಿಡಿದು ಬಂದ 7 ವರ್ಷದ ಬಾಲಕನೊಬ್ಬ ಸಹಿ ಮಾಡಿ ಆಟೋಗ್ರಾಪ್ ಅನ್ನು ಕೊಹ್ಲಿ ಕೈಗಿಟ್ಟಿದ್ದಾನೆ.

ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಬಾಲಕ ಆಟೋಗ್ರಾಫ್ ನೀಡಿದ್ದನ್ನು ಕಂಡು ಮುಗುಳು ನಗೆ ಬೀರಿದರು. ಈ ದೃಶ್ಯವನ್ನು ಬಾಲಕನ ಮಾವ ಅಮಿತ್ ಲಖಾನಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 18 ಸೆಕೆಂಡ್ ಇರುವ ಬಾಲಕನ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದುಬೀಗಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆ ಮುರಿದು ಇತಿಹಾಸ ರಚಿಸಿದ್ದಾರೆ. ಆದರೆ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದು ಕೊಹ್ಲಿ ಅವರ ನಾಲ್ಕನೇ ಗೋಲ್ಡನ್ ಡಕೌಟ್ ಆಗಿದೆ. ಮೊದಲ ಟೆಸ್ಟ್ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಸೇರಿದಂತೆ 76 ರನ್ ಕಲೆ ಹಾಕಿದ್ದರು. ಹೀಗಾಗಿ ಕೊಹ್ಲಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ  ಅಗ್ರಸ್ಥಾನದಿಂದ ಕೆಳಗೆ ಇಳಿದಿದ್ದಾರೆ.

ಆ್ಯಶನ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟ್ಸ್‌ಮನ್‍ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ 904 ಅಂಕದೊಂದಿಗೆ ಟಾಪ್‍ನಲ್ಲಿದ್ದಾರೆ. ವಿರಾಟ್ ಕೊಹ್ಲಿ 903 ಅಂಕದಿಂದ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದು 878 ಅಂಕ ಹೊಂದಿದ್ದಾರೆ. ಅಜಿಂಕ್ಯ ರಹಾನೆ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ರಹಾನೆ 4 ಸ್ಥಾನ ಏರಿಕೆ ಕಂಡು ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಬುಮ್ರಾ ನಂಬರ್ 3ನೇ ಸ್ಥಾನಕ್ಕೆ ಏರಿದ್ದಾರೆ. ಬುಮ್ರಾ 835 ಅಂಕ ಪಡೆದರೆ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 908 ಅಂಕಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. 764 ಅಂಕ ಗಳಿಸಿರುವ ರವೀಂದ್ರ ಜಡೇಜಾ 11ನೇ ಸ್ಥಾನಕ್ಕೆ ಇಳಿದಿದ್ದು, ದಕ್ಷಿಣ ಆಫ್ರಿಕಾದ ಕಗಿಸೋ ರಬಡಾ 851 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *