ಒಂದೂವರೆ ಸಾವಿರ ಕೊಟ್ಟಿಲ್ಲವೆಂದು ತಂದೆ-ತಾಯಿಯನ್ನೇ ಕೊಂದ ಅಪ್ರಾಪ್ತ

– ಹೆತ್ತವರ ಜೊತೆ ಸಹೋದರನನ್ನೂ ಕೊಲೆಗೈದ

ಭೋಪಾಲ್: ತನಗೆ ಒಂದೂವರೆ ಸಾವಿರ ಹಣ ಕೊಡಲಿಲ್ಲವೆಂದು ಅಪ್ರಾಪ್ತನೊಬ್ಬ ತನ್ನ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಗೆ 18 ವರ್ಷ ತುಂಬಲು ಕೇವಲ 7 ತಿಂಗಳಷ್ಟೇ ಬಾಕಿ ಇತ್ತು.

ಸಿಕ್ಕಿಬಿದ್ದಿದು ಹೇಗೆ?
ಬಾಲಕ ನಗರದ ಮಾಕ್ರೋನಿಯಾ ಅಂಗಡಿಯಲ್ಲಿ ಸಿಮ್ ಕಾರ್ಡ್ ತೆಗೆದುಕೊಳ್ಳುವ ವೇಳೆ ಬಾಲಕ ಸಿಕ್ಕಿಬಿದ್ದಿದ್ದಾನೆ ಎಂದು ಜಿಲ್ಲಾ ಎಸ್‍ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.

ನಡೆದಿದ್ದೇನು?:
ಜನವರಿ 24ರಂದು ಬಾಲಕ ತನ್ನ ತಾಯಿಯನ್ನು 1,500 ಕೊಡುವಂತೆ ಪೀಡಿಸಿದ್ದಾನೆ. ಈ ವೇಳೆ ಮಗನಿಗೆ ಹಣ ನೀಡಲು ತಾಯಿ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಾಲಕ ಚೂಡಿದಾರ ದುಪ್ಪಟ್ಟವನ್ನು ತಾಯಿಯ ಕುತ್ತಿಗೆಗೆ ಸುತ್ತಿದ್ದಾನೆ. ಆದ್ರೆ ತಾಯಿ ಸತ್ತಿಲ್ಲವೆಂದು ಶಂಕಿಸಿ ತಂದೆಯ ಲೈಸೆನ್ಸ್ ಗನ್ ತೆಗೆದುಕೊಂಡು ಬಂದು ತಾಯಿಯ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ.

ತಾಯಿಯನ್ನು ಕೊಲೆಗೈದ ಬಳಿಕ ಬಾಲಕ ತಂದೆಯ ಮೇಲೂ ಗುಂಡು ಹಾರಿಸಿದ್ದಾನೆ. ಪರಿಣಾಮ ಮನೆಯೊಳಗಡೆ ಮೆಟ್ಟಿಲಲ್ಲೇ ತಂದೆ ಪ್ರಾಣ ಬಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ ಅಲ್ಲೇ ಇದ್ದ ತನ್ನ ಸಹೋದರನನ್ನು ಕೂಡ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕೋಣೆಯೊಳಗೆ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಕೊಲೆಯ ಬಳಿಕ ‘ಇದಕ್ಕೆ ನಾನೇ ಜವಾಬ್ದಾರ, ನಾನು ಸಾಯಲು ಹೋಗುತ್ತಿದ್ದೇನೆ. ಹೀಗಾಗಿ ನನ್ನನ್ನು ಯಾರೂ ಹುಡುಕಬೇಡಿ’ ಎಂದು ಪತ್ರವನ್ನೂ ಬರೆದಿಟ್ಟಿದ್ದಾನೆ. ಸದ್ಯ ಈ ಪತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *