ಶಾಲೆಯಲ್ಲಿ ಆಟವಾಡಲು ಬಾರದಕ್ಕೆ ಜಗಳ: ವಿದ್ಯಾರ್ಥಿ ಸಾವು

ನವದೆಹಲಿ: ಶಾಲೆಯಲ್ಲಿ ಆಟವಾಡಲು ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ದೆಹಲಿಯ ಕರವಾಲ್ ನಗರದಲ್ಲಿ ನಡೆದಿದೆ.

7ನೇ ತರಗತಿಯ ಪ್ರಿನ್ಸ್ ಜಗಳದಲ್ಲಿ ಮೃತಪಟ್ಟ ದುರ್ದೈವಿ. ಸ್ನೇಹಿತರ ನಡುವಿನ ಜಗಳದ ಸಂದರ್ಭದಲ್ಲಿ ಪ್ರಿನ್ಸ್ ನನ್ನು ಬಲವಾಗಿ ತಳ್ಳಿದ ಕಾರಣದಿಂದ ಆತನ ತಲೆ ಗೋಡೆ ತಗುಲಿ ಸ್ಥಳದಲ್ಲೇ ಮೂರ್ಛೆ ಬಂದು ಬಿದ್ದಿದ್ದಾನೆ.

ತಕ್ಷಣ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಸ್ಥಳೀಯ ಖಾಸಗಿ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತ ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲಾ ಅವಧಿ ಮುಕ್ತಾಯವಾದ ನಂತರ ಪ್ರಿನ್ಸ್ ನನ್ನು ಇತರೆ ವಿದ್ಯಾರ್ಥಿಗಳು ಆಟವಾಡಲು ಕರೆದಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಯ ನಡುವೆ ಜಗಳ ಆರಂಭವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಪ್ರಿನ್ಸ್‍ನನ್ನು ಜೋರಾಗಿ ತಳ್ಳಿದ ಪರಿಣಾಮ ಸಾವು ಸಂಭವಿಸಿದೆ. ವಿದ್ಯಾರ್ಥಿಯ ದೇಹದ ಮೇಲೆ ಬೇರೆಯಾವ ರೀತಿಯ ಗಾಯದ ಗುರುತುಗಳು ಕಾಣಿಸಿಲ್ಲ. ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಎಲ್ಲವೂ ತಿಳಿಯಲಿದೆ ಎಂದು ದೆಹಲಿಯ ಈಶಾನ್ಯ ಪೊಲೀಸ್ ಆಯುಕ್ತ ಎ.ಕೆ ಸಿಂಗ್ಲಾ ತಿಳಿಸಿದ್ದಾರೆ.

ಘಟನೆಯ ಕುರಿತು ಶಾಲೆಯ ಆಡಳಿತ ಮಂಡಳಿ ತಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ವಿದ್ಯಾರ್ಥಿ ಸ್ನೇಹಿತರು ಪೋಷಕರಿಗೆ ಮಾಹಿತಿಯನ್ನು ನೀಡಿದ್ದು. ಅವರು ಆಸ್ಪತ್ರೆಗೆ ಬರುವ ವೇಳೆಗೆ ಪ್ರಿನ್ಸ್ ಸಾವನ್ನಪಿದ್ದ ಎಂದು ಪ್ರಿನ್ಸ್ ಸಹೋದರಿ ಕಾಂಚನ್ ತಿಳಿಸಿದ್ದಾರೆ.

ಪ್ರಿನ್ಸ್ ನ ಪೋಷಕರು ನಾಲ್ಕು ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, 2 ತಿಂಗಳ ಹಿಂದೆಯೇ ತಮ್ಮ ಮಗನ ವಿರುದ್ಧ ಆತನ ಸಹಪಾಠಿ ವಿದ್ಯಾರ್ಥಿಗಳು ಜಗಳ ನಡೆಸಿ ಹಲ್ಲೆ ನಡೆಸಿದ್ದರು. ಈ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿದ್ದಾರೆ.

ಶಾಲೆಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮಾರವನ್ನು ಆಳವಡಿಸಲಾಗಿಲ್ಲ ಹಾಗೂ ಘಟನೆ ನಡೆದ ಸಂದರ್ಭದಲ್ಲಿ ಶಿಕ್ಷಕರು ತರಗತಿಯಲ್ಲಿ ಇರಲಿಲ್ಲ ಎಂದು ಕಾಂಚನ ತಿಳಿಸಿದ್ದಾರೆ.

ಸದ್ಯ ಘಟನೆ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ದೆಹಲಿಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *