ತಪ್ಪಿದ ಸೈಕಲ್ ಬ್ಯಾಲೆನ್ಸ್- ಎಟಿಎಂ ಬೋರ್ಡ್ ಕಂಬ ಹಿಡಿದ ಬಾಲಕ ದುರ್ಮರಣ

ಚೆನ್ನೈ: ಎಟಿಎಂ ಬೋರ್ಡಿಗೆ ಅಳವಡಿಸಿದ್ದ ಕಂಬ ತಾಗಿ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಕುಲ್ಲಂಚವಾಡಿಯಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ನಡೆದಿದ್ದು, ಬಾಲಕನನ್ನು 13 ವರ್ಷದ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಾಪಸ್ ಬರುತ್ತಿದ್ದಾಗ ಎಟಿಎಂ ಬೋರ್ಡ್ ಅಳವಡಿಸಿದ್ದ ಕಂಬ ತಗುಲಿ ಸಾವಿಗೀಡಾಗಿದ್ದಾನೆ.

ನಡೆದಿದ್ದೇನು..?
ಬಾಲಕ ಜ್ವರದಿಂದ ಬಳಲುತ್ತಿದ್ದನು. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ತನ್ನ ಸೈಕಲಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದನು. ಹೀಗೆ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿ ಬಾಲಕ ಅವಘಡಕ್ಕೆ ತುತ್ತಾಗಿದ್ದಾನೆ ಎಂಬುದಾಗಿ ವರದಿಯಾಗಿದೆ.

ವಾಹನದಿಂದಾಗುವ ದುರ್ಘಟನೆ ತಪ್ಪಿಸಲೆಂದು ಹೋದಾಗ ಬಾಲಕನ ಸೈಕಲ್ ಬ್ಯಾಲೆನ್ಸ್ ತಪ್ಪಿದೆ. ಇದೇ ಸಂದರ್ಭದಲ್ಲಿ ಆತ ತನ್ನ ರಕ್ಷಣೆಗಾಗಿ ಪಕ್ಕದಲ್ಲಿದ್ದ ಎಟಿಎಂ ಕಂಬವನ್ನು ಹಿಡಿದುಕೊಂಡಿದ್ದಾನೆ. ಈ ವೇಳೆ ವಿದ್ಯುತ್ ಹರಿದಿದೆ. ಎಟಿಎಂ ಜಾಹೀರಾತಿಗೆ ಹಾಕಲಾಗಿದ್ದ ಬಲ್ಬ್ ಆಫ್ ಮಾಡಲಾಗಿತ್ತು. ಆದರೆ ವಿದ್ಯುತ್ ಪ್ರವಹಿಸುತ್ತಿದ್ದ ವೈರ್ ಕಂಬಕ್ಕೆ ಟಚ್ ಆಗಿತ್ತು. ಈ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ.

ಘಟನೆ ನಡೆದ ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಸ್ಥಳೀಯರು ಕರೆದೊಯ್ದಿದ್ದಾರೆ. ಆದರೆ ಬಾಲಕ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ದುರ್ಘಟನೆಯ ಸಂಬಂಧ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಐಪಿಸಿ ಸೆಕ್ಷನ್ 304ಎ(ನಿರ್ಲಕ್ಷ್ಯ)ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *