ಚಾಕ್ಲೇಟ್ ಅಂತಾ ಮಾತ್ರೆ ಸೇವಿಸಿದ್ದ ಕಂದಮ್ಮ ದುರ್ಮರಣ

ಚಿತ್ರದುರ್ಗ: ಚಾಕ್ಲೇಟ್ (Chocolate) ‌ಎಂದು ಭಾವಿಸಿ ಮಾತ್ರೆ ಸೇವಿಸಿದ್ದ ಮಗು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ‌‌ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಕಳೆದ ನಾಲ್ಕು‌ ದಿನಗಳ ಹಿಂದೆ ಕಡಬನಕಟ್ಟೆ ಗ್ರಾಮದ ವಸಂತ್ ಕುಮಾರ್ ಹಾಗೂ ಪವಿತ್ರ ದಂಪತಿಯ ಪುತ್ರ ಹೃತ್ವಿಕ್(4) ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದನು. ಇದನ್ನೂ ಓದಿ: ನಮ್ಮ ಸರ್ಕಾರ ಉಗ್ರರನ್ನು ಹಿಡಿದು ಜೈಲಿಗೆ ಕಳಿಸುವ ಕೆಲಸ ಮಾಡುತ್ತೆ: ರಾಮಲಿಂಗಾ ರೆಡ್ಡಿ

ಬಾಲಕ ಅಸ್ವಸ್ಥಗೊಂಡ ವಿಚಾರ ಗೊತ್ತಾಗುತ್ತಿದ್ದಂತೆಯೇ ಪೋಷಕರು ಆತನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಕಳೆದ ನಾಲ್ಕು ದಿನಗಳಿಂದ‌ ಚಿಕಿತ್ಸೆ ನೀಡಲಾಗಿದ್ದು, ಬಾಲಕನ ಜೀವ ಉಳಿಸಲು ವೈದ್ಯರು ಶ್ರಮಪಟ್ಟಿದ್ದರು. ಆದರೆ ಚಿಕಿತ್ಸೆ ಫಲಿಸದೇ‌ ಇಂದು ಬಾಲಕ ಕೊನೆಯುಸಿರೆಳೆದಿದ್ದಾನೆ.

ಮೃತ ಮಗುವಿನ ತಾಯಿ ಪವಿತ್ರಾಗೆ ಈ ಹಿಂದೆ 3 ಶಸ್ತ್ರಚಿಕಿತ್ಸೆಗಳಾಗಿದ್ದು,ಆಕೆಗೆ ವೈದ್ಯರು ನೀಡಿದ್ದ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದರು. ಆದರೆ ಚಾಕ್ಲೇಟ್ ಎಂದು ಭಾವಿಸಿದ್ದ ಮಗು ಆ ಮಾತ್ರೆಗಳನ್ನು ಸೇವಿಸಿತ್ತು.‌ ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದೆ. ಇದರಿಂದಾಗಿ ಮಗುವಿನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಪ್ರಕರಣ ತುರುವನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.