10 ಎಕರೆ ಬೌರಿಂಗ್ ಜಾಗಕ್ಕೆ ವರ್ಷಕ್ಕೆ ಕೇವಲ 30 ರೂ. ಬಾಡಿಗೆ!

ಬೆಂಗಳೂರು: ಕೋಟಿ ಕೋಟಿ ಅಕ್ರಮ ಸಂಪತ್ತು ಸಿಕ್ಕ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಕ್ಲಬ್ ಜಾಗದ ಬಾಡಿಗೆ ಕೇವಲ 30 ರೂಪಾಯಿ.

ಹೌದು. 10 ಎಕರೆ ಜಾಗದಲ್ಲಿರುವ ಬೌರಿಂಗ್ ಕ್ಲಬ್ ಬಿಬಿಎಂಪಿಗೆ ವರ್ಷಕ್ಕೆ 30 ರೂ. ಬಾಡಿಗೆಯನ್ನು ನೀಡುತ್ತಿದೆ. ವರ್ಷಕ್ಕೆ 30 ರೂ. ಬಾಡಿಗೆ ನೀಡುವ ಬೌರಿಂಗ್ ಕ್ಲಬ್ ಸದಸ್ಯತ್ವ ಪಡೆಯಲು 20 ಲಕ್ಷ ರೂ. ನೀಡಬೇಕು. ಲಾಕರ್ ನಲ್ಲಿ ಅಕ್ರಮ ಸಂಪತ್ತು ಪತ್ತೆಯಾದ ಬಳಿಕ ಬಾಡಿಗೆ ಹೆಚ್ಚಿಸುವ ಕುರಿತು ಬಿಬಿಎಂಪಿಯಲ್ಲಿ ಚರ್ಚೆ ನಡೆಯುತ್ತಿದೆ

ಭಾರೀ ಆದಾಯ:
1956ರಲ್ಲಿ 99 ವರ್ಷಗಳ ಅವಧಿಗೆ ಬೌರಿಂಗ್ ಕ್ಲಬ್‍ಗೆ 10 ಎಕರೆ ಜಾಗವನ್ನು ವಾರ್ಷಿಕ 30 ರೂ. ಬಾಡಿಗೆಯನ್ನು ಬಿಬಿಎಂಪಿ ನಿಗದಿಪಡಿಸಿ ಗುತ್ತಿಗೆಗೆ ನೀಡಿದೆ. ಈ ಜಾಗದ ಗುತ್ತಿಗೆ ಅವಧಿ 99 ವರ್ಷವಾಗಿದ್ದು, 2055ರವರಗೆ ಈ ಜಾಗವನ್ನು ಬೌರಿಂಗ್ ಕ್ಲಬ್ ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳಲಿದೆ. ವಾರ್ಷಿಕ ಕೇವಲ 30 ರೂ. ಬಾಡಿಗೆ ನೀಡುತ್ತಿರುವ ಬೌರಿಂಗ್ ಕ್ಲಬ್‍ನ ತಾತ್ಕಾಲಿಕ ಸದಸ್ಯತ್ವ ಪಡೆಯಲು 2 ಲಕ್ಷ ರೂ. ಕಾಯಂ ಸದಸ್ಯತ್ವಕ್ಕೆ 20 ಲಕ್ಷ ರೂ. ನೀಡಬೇಕು.

ನಿಗದಿ ಮಾಡಲಾಗಿದ್ದ ಮೊತ್ತ ಹೆಚ್ಚಿಸುವಂತೆ 1956ರಲ್ಲಿ ಆರ್.ದಯಾನಂದ್ ಕೌನ್ಸಿಲ್‍ನಲ್ಲಿ ವಾದ ಮಂಡಿಸಿದ್ದರು. 99 ವರ್ಷಗಳ ಬದಲಿಗೆ 10 ವರ್ಷಕ್ಕೆ ಗುತ್ತಿಗೆ ನೀಡಿದ್ರೆ ಒಳ್ಳೆಯದು ಎಂಬುವುದು ದಯಾನಂದವರ ವಾದವಾಗಿತ್ತು. ಅಂದು ನಡೆದ ಸಭೆಯಲ್ಲಿ ಕ್ಲಬ್‍ಗೆ 99 ವರ್ಷಕ್ಕೆ ಜಾಗ ಗುತ್ತಿಗೆ ನೀಡುವುದರ ಪರವಾಗಿ 19 ಮತಗಳ ಚಲಾವಣೆಯಾದ್ರೆ, ವಿರೋಧವಾಗಿ 4 ಮತಗಳು ಮಾತ್ರ ಚಲಾವಣೆಯಾದಗಿದ್ದವು.

ಹೇಗಿದೆ ಬೌರಿಂಗ್ ಕ್ಲಬ್:
ಕ್ಲಬ್ ಸದಸ್ಯರಿಗಾಗಿ 2 ಬ್ಯಾಡ್ಮಿಂಟನ್ ಕೋರ್ಟ್, 4 ಬಿಲಿಯರ್ಡ್ಸ್, 5 ಟೆನಿಸ್ ಕೋರ್ಟ್, ಹೆಲ್ತ್ ಪಾರ್ಲರ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳಿವೆ. ಕ್ಲಬ್‍ನಲ್ಲಿ ಸದಸ್ಯರು ಉಳಿದುಕೊಳ್ಳಲು ವಿವಿಧ ಮಾದರಿಯ 60 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇವುಗಳಿಂದಲೂ ಕ್ಲಬ್‍ಗೆ ಆದಾಯ ಬರುತ್ತದೆ. ಸದಸ್ಯತ್ವ ಪಡೆದವರಿಗೆ ಮಾತ್ರ ಕ್ಲಬ್ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಕ್ಲಬ್ ಪ್ರವೇಶಿಸಿಬೇಕಾದ್ರೆ ನಿಗದಿತ ಸಮವಸ್ತ್ರ ಧರಿಸಲೇಕು. ಟ್ರ್ಯಾಕ್ ಪ್ಯಾಂಟ್, ಶಾಟ್ರ್ಸ್ ಧರಿಸಿದವರಿಗೆ ಪ್ರವೇಶವಿಲ್ಲ.

ನಕ್ಷೆ ಬದಲಾವಣೆ?:
ಗುತ್ತಿಗೆಗೆ ಒಪ್ಪಂದದಲ್ಲಿ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸಬಾರದು ಎಂಬುವುದು ಉಲ್ಲೇಖಿಸಲಾಗಿದೆ. ಆದ್ರೆ ಕ್ಲಬ್ ನಕ್ಷೆಗೂ ಮೀರಿ ಅಕ್ರಮವಾಗಿ ತನ್ನ ಸದಸ್ಯರಿಗೆ ಕೊಠಡಿ, ಆಟದ ಮೈದಾನ, ಸ್ಪೆಶಲ್ ಗೆಸ್ಟ್ ರೂಮ್‍ಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಈಗ ಕೇಳಿಬಂದಿದೆ.

ಹಣ ಸಿಕ್ಕಿದ್ದು ಹೇಗೆ?
ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಎಂದು ಸದಸ್ಯರಿಗೆ ತಿಳಿಸಿತ್ತು. ಒಂದು ವೇಳೆ ಲಾಕರ್ ನಲ್ಲಿರುವ ವಸ್ತು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ನೋಟಿಸ್ ಕಳುಹಿಸಿತ್ತು. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ನೋಟಿಸಿನಲ್ಲಿ ತಿಳಿಸಿತ್ತು. ಆದರೆ ಉದ್ಯಮಿ ಅವಿನಾಶ್ ನೋಟಿಸ್ ಬಗ್ಗೆ ತಲೆ ತಲೆಕೆಡಿಸಿಕೊಂಡಿರಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಒಡೆದಿತ್ತು. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿತ್ತು. ರಾಜಸ್ಥಾನ ಮೂಲದ ಅವಿನಾಶ್ ಅಮರ್ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಬೆಂಗಳೂರಲ್ಲಿ 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಲಾಕರ್ ನಲ್ಲಿ ಏನಿತ್ತು?
ಉದ್ಯಮಿ ಅವಿನಾಶ್ ಅಮರ್ ಲಾಲ್, ನಗರದ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದರು. ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಅವರು ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. 2 ಲಾಕರ್ ಓಪನ್ ಮಾಡಿದ್ದು, ಅದರಲ್ಲಿ 2 ಬ್ಯಾಗ್ ಪತ್ತೆಯಾಗಿತ್ತು. ಈ 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/

Comments

Leave a Reply

Your email address will not be published. Required fields are marked *