Pink Ball Test | ಭಾರತಕ್ಕೆ ಮತ್ತೆ ಟ್ರಾವಿಸ್‌ ʻಹೆಡ್ಡೇಕ್‌ʼ – ಆಸೀಸ್‌ಗೆ 29 ರನ್‌ಗಳ ಮುನ್ನಡೆ

ಅಡಿಲೇಡ್‌: ಇಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ ಬಿಗಿ ಹಿಡಿತ ಸಾಧಿಸಿದೆ. 2ನೇ ದಿನದಾಟದಲ್ಲಿ ಟ್ರಾವಿಸ್‌ ಹೆಡ್‌ (Travis Head) ಸಿಡಿಸಿದ ಶತಕವು ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹೆಡ್‌ ಶತಕದ ನೆರವಿನಿಂದ ಆಸೀಸ್‌ (Australia) ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್‌ ಕಲೆಹಾಕಿದೆ. ಬಳಿಕ ತನ್ನ ಸರದಿಯ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ 24 ಓವರ್‌ಗಳಲ್ಲಿ 128 ರನ್‌ಗಳಿಗೆ ಪ್ರಮುಖ 5 ವಿಕೆಟ್‌ ಕಳೆದುಕೊಂಡಿದ್ದು, 29 ರನ್‌ಗಳ ಹಿನ್ನಡೆ ಅನುಭವಿಸಿದೆ.

ಭಾರತ 128ಕ್ಕೆ 5 ವಿಕೆಟ್‌:
ತನ್ನ ಸರದಿಯ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ವೇಗಿಗಳ ದಾಳಿಗೆ ತತ್ತರಿಸಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಮತ್ತೆ ವೈಫಲ್ಯ ಅನುಭವಿಸಿದ್ರು. ಯಶಸ್ವಿ ಜೈಸ್ವಾಲ್‌ 24 ರನ್‌, ಶುಭಮನ್‌ ಗಿಲ್‌ 28 ರನ್‌, ರೋಹಿತ್‌ ಶರ್ಮಾ (Rohit Sharma) 6 ರನ್‌, ವಿರಾಟ್‌ ಕೊಹ್ಲಿ 11 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದ್ರು. ಇನ್ನೂ ರಿಷಭ್‌ ಪಂತ್‌ 28 ರನ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ 15 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಟೀಂ ಇಂಡಿಯಾ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಆಸೀಸ್‌ ವೇಗಿಗಳಾದ ಸ್ಕಾಟ್‌ ಬೋಲೆಂಡ್‌, ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌ ಒಂದು ವಿಕೆಟ್‌ ಪಡೆದರು.

ಇನ್ನೂ ಮೊದಲ ದಿನದ ಅಂತ್ಯಕ್ಕೆ 33 ಓವರ್‌ಗಳಲ್ಲಿ 86 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಇಂದು 2ನೇ ದಿನದ ಇನ್ನಿಂಗ್ಸ್‌ ಆರಂಭಿಸಿತು. 103 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆಸೀಸ್‌ಗೆ ಮಧ್ಯಮ ಕ್ರಮಾಂಕದ ಆಟಗಾರರು ಜೀವ ತುಂಬಿದರು. ಮಾರ್ನಸ್‌ ಲಾಬುಶೇನ್‌ – ಟ್ರಾವಿಸ್‌ ಹೆಡ್‌ ಅವರ 65 ರನ್‌ ಜೊತೆಯಾಟ, ಮಿಚೆಲ್‌ ಮಾರ್ಶ್‌ -ಹೆಡ್‌ 40 ರನ್‌ಗಳ ಜೊತೆಯಾಟ ಹಾಗೂ ಅಲೆಕ್ಸ್‌ ಕ್ಯಾರಿ – ಹೆಡ್‌ ಅವರ 74 ರನ್‌ಗಳ ಜೊತೆಯಾಟ ತಂಡದ ಮೊತ್ತ ಹೆಚ್ಚಿಸಲು ಕಾರಣವಾಯಿತು.

ಟ್ರಾವಿಸ್‌ ಹೆಡ್‌ ಶತಕ:
ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಟ್ರಾವಿಸ್‌ ಹೆಡ್‌ 141 ಎಸೆತಗಳಲ್ಲಿ 140 ರನ್‌ (17 ಬೌಂಡರಿ, 4 ಸಿಕ್ಸರ್)‌ ಸಿಡಿಸಿದರು. ಇದರೊಂದಿಗೆ ಮಾರ್ನಸ್‌ ಲಾಬುಶೇನ್‌ 64 ರನ್‌ (126 ಎಸೆತ, 9 ಬೌಂಡರಿ), ನಾಥನ್‌ ಮ್ಯಾಕ್‌ಸ್ವೀನಿ 39 ರನ್‌, ಉಸ್ಮಾನ್‌ ಖವಾಜ 13 ರನ್‌, ಅಲೆಕ್ಸ್‌ ಕ್ಯಾರಿ 15 ರನ್‌, ಪ್ಯಾಟ್‌ ಕಮ್ಮಿನ್ಸ್‌ 12 ರನ್‌, ಮಿಚೆಲ್‌ ಸ್ಟಾರ್ಕ್‌ 18 ರನ್‌, ನಥಾನ್‌ ಲಿಯಾನ್‌ 4 ರನ್‌ಗಳ ಕೊಡುಗೆ ನೀಡಿದರು.

ಭಾರತರ ಪರ ಜಸ್ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ತಲಾ 4 ವಿಕೆಟ್‌ ಕಿತ್ತರೆ, ನಿತೀಶ್‌ ಕುಮಾರ್‌ ರೆಡ್ಡಿ, ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.