ಪೊಲೀಸರ ಮೇಲೇ ಪ್ರತಿದೂರು ದಾಖಲಿಸ್ತಿದ್ದ, ಸಂಸದರ ಸಂಬಂಧಿಗೆ ಪಂಗನಾಮ ಹಾಕಿದ್ದ ನಾಗ

ಬೆಂಗಳೂರು: ನಗರದ ಶ್ರೀರಾಂಪುರದ ಮಾಜಿ ರೌಡಿಶೀಟರ್ ಬಾಂಬ್ ನಾಗನ ಮನೆ ಮೇಲೆ ಇಂದು ಪೊಲೀಸರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಆತ ಈ ಹಿಂದೆ ನಡೆಸಿದ್ದ ವಂಜನೆ ಹಾಗೂ ರೌಡಿಸಂನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬೆಂಗಳೂರಿನ ಹೊರಗೂ ಬಾಂಬ್ ನಾಗನ ರೌಡಿಸಂ: ಬಾಂಬ್ ನಾಗ ಬೆಂಗಳೂರಿನ ಹೊರಗೂ ರೌಡಿಸಂ ಮಾಡಿದ್ದ. ಫಾರ್ಮ್ ಹೌಸ್ ಮಾಲೀಕರನ್ನ ಅಪಹರಿಸಿ ಫಾರ್ಮ್ ಹೌಸ್ ಬರೆಸಿಕೊಂಡ ನಾಗ ರಾಜಣ್ಣ ಎಂಬವರನ್ನು 2015 ಆಗಸ್ಟ್ ತಿಂಗಳಲ್ಲಿ ಕಿಡ್ನಾಪ್ ಮಾಡಿದ್ದ ಬಾಂಬ್ ನಾಗ, ನೆಲಮಂಗಲದ ಕಾಸರಘಟ್ಟದಲ್ಲಿರುವ ಐಷಾರಾಮಿ ಬಂಗಲೆಯ್ನನ ಅವರಿಂದ ಬರೆಸಿಕೊಂಡಿದ್ದ. ಈ ಬಗ್ಗೆ ದಾಬಸ್‍ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಂಗಲೆ ವಿಚಾರದಲ್ಲಿ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬಂಗಲೆಯ ಸುತ್ತ ಹತ್ತು ಅಡಿ ಕಾಂಪೌಂಡ್ ನಿರ್ಮಿಸಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಬೃಹತ್ ಕಾಂಪೌಂಡ್ ಗೋಡೆಗೆ ಬಾಂಬ್ ನಾಗ ವಿದ್ಯುತ್ ತಂತಿ ಕೂಡ ಅಳವಡಿಸಿದ್ದಾನೆ.

ಸಂಸದರ ಸಂಬಂಧಿಗೆ ಪಂಗನಾಮ: ಬಾಂಬ್ ನಾಗನ ದುಡ್ಡಿನ ದಂಧೆ ಪ್ರಕರಣ ಹೊಸದೇನಲ್ಲ. ಈ ಹಿಂದೆ ಲೋಕಸಭಾ ಸದಸ್ಯರ ಸಂಬಂಧಿಯೊಬ್ಬರಿಗೆ ಒಂದು ಕೋಟಿ ರುಪಾಯಿ ಚಳ್ಳೆಹಣ್ಣು ತಿನ್ನಿಸಿರೋ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್‍ನಲ್ಲಿ ಸಂಸದರೊಬ್ಬರ ಸಂಬಂಧಿಗೆ ಒಂದು ಕೋಟಿ ರುಪಾಯಿ ಹಳೇ ನೋಟನ್ನು ಪಿಂಕ್ ನೋಟ್ ಮಾಡಿಕೊಡುವುದಾಗಿ ಹೇಳಿದ್ದ ನಾಗ ಹಳೇ ನೋಟುಗಳನ್ನು ಪಡೆದುಕೊಂಡು ಉಂಡೇನಾಮ ತೀಡಿದ್ದ. ಈ ಸಂಬಂಧ ಸಿಸಿಬಿಗೆ ದೂರು ಬಂದಿತ್ತು. ಈ ದೂರಿನ ಜೊತೆ ಸರ್ಚ್ ವಾರೆಂಟ್ ಇಟ್ಟುಕೊಂಡು ಹೋದ ಇನ್ಸ್ ಪೆಕ್ಟರ್ ಮಹಾನಂದ ಅವರ ಮೇಲೆ 35 ಮಂದಿ ಮಹಿಳೆಯರಿಂದ ಅಟ್ಯಾಕ್ ಮಾಡಿಸಿ ನಾಗ ಹಗೆ ಸಾಧಿಸಿದ್ದ. ಅನಂತರ ಇನ್ಸ್ ಪೆಕ್ಟರ್ ಸೇರಿದಂತೆ ಎಲ್ಲರ ಮೇಲೂ ಕೇಸ್ ಕೂಡ ಹಾಕಿದ್ದ. ನಾನು ಇಲ್ಲದೇ ಇರುವಾಗ ಹೆಂಡ್ತಿ ಮಕ್ಕಳ ಜೊತೆ ಗಲಾಟೆ ಮಾಡಿದ್ದಾರೆ ಅಂತ ದೂರು ಕೊಟ್ಟಿದ್ದ. ವಿಚಿತ್ರವೆಂದ್ರೆ ಈ ಪ್ರಕರಣದಲ್ಲಿ ಸಿಸಿಬಿ ಹಿರಿಯ ಅಧಿಕಾರಿಗಳು ಮತ್ತು ಶ್ರೀರಾಮಪುರದ ಪೊಲೀಸರಿಂದಲೇ ಸಹಕಾರ ದೊರೆಯಲಿಲ್ಲ ಎನ್ನಲಾಗಿದೆ.

 

Comments

Leave a Reply

Your email address will not be published. Required fields are marked *