ಪುಲ್ವಾಮಾ ವೀರರಿಗೆ ಬಾಲಿವುಡ್ ಸಲಾಂ- ರಿಲೀಸ್ ಆಗ್ತಿದೆ ವಿಶೇಷ ಹಾಡು

ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್ ವೀರ ಯೋಧರ ಬಲಿದಾನಕ್ಕೆ ಸ್ಮರಣಾರ್ಥಕವಾಗಿ `ತು ದೇಶ್ ಹೈ ಮೇರಾ’ ಎಂಬ ಧ್ಯೇಯ ವಾಕ್ಯದ ಹಾಡು ರಿಲೀಸ್ ಮಾಡಲಾಗುತ್ತಿದ್ದು, ಈ ಹಾಡಿನಲ್ಲಿ ಬಾಲಿವುಡ್ ಸ್ಟಾರ್ಸ್‍ ವೀರ ಯೋಧರಿಗೆ ನಮನ ಸಲ್ಲಿಸಲಿದ್ದಾರೆ.

`ತು ದೇಶ್ ಹೈ ಮೇರಾ’ ಹಾಡಿನಲ್ಲಿ ಇಡೀ ಬಿಟೌನ್ ಸ್ಟಾರ್ ಗಳು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಆಮೀರ್ ಖಾನ್, ರಣ್‍ಬೀರ್ ಕಪೂರ್ ಹಾಡಿಗೆ ಸಾಥ್ ನೀಡಿದ್ದಾರೆ. ಹಾಡಿನ ಮೇಕಿಂಗ್‍ನಲ್ಲಿ ಕಾಣಿಸಿಕೊಂಡಿರುವ ನಟರ ಜೊತೆ ಸಲ್ಮಾನ್ ಖಾನ್, ಅಜಯ್ ದೇವಗನ್, ರಣ್‍ವೀರ್ ಸಿಂಗ್, ವರುಣ್ ಧವನ್, ಅನೂಪ್ ಖೇರ್, ಅಕ್ಷಯ್ ಕುಮಾರ್ ಮತ್ತು ಶಾರೂಖ್ ಖಾನ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸಿಆರ್​ಪಿಎಫ್ ಟ್ವೀಟ್ ಮಾಡಿದ್ದು, ಹುತಾತ್ಮ ಯೋಧರಿಗೆ ಹಾಗೂ ಭಾರತೀಯ ಸೈನ್ಯಕ್ಕೆ ಬಾಲಿವುಡ್ ಹಾಗೂ ಭಾರತೀಯ ಪ್ರಜೆಗಳು ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದ ತಿಳಿಸಿದೆ.

ಟ್ವೀಟ್‍ನಲ್ಲಿ ಏನಿದೆ?
ಬಾಲಿವುಡ್ ಸ್ಟಾರ್ಸ್‍ ಗಳು `ತು ದೇಶ್ ಹೈ ಮೇರಾ’ ಹಾಡನ್ನು ಹುತಾತ್ಮ ಯೋಧರಿಗೆ ಸಮರ್ಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಹುತಾತ್ಮ ವೀರ ಯೋಧರ ಬಗ್ಗೆ ನೀವು ತೋರುತ್ತಿರುವ ಗೌರವ, ಬೆಂಬಲಕ್ಕೆ ನಾವು ನಿಮಗೆ ಧನ್ಯವಾದ ತಿಳಿಸುತ್ತಿದ್ದೇವೆ ಎಂದು ಬರೆದು, ಅಮಿತಾಬ್ ಬಚ್ಚನ್, ಆಮೀರ್ ಖಾನ್ ಹಾಗೂ ರಣ್‍ಬೀರ್ ಕಪೂರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿದೆ.

ಸದ್ಯ ಈ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಆದಷ್ಟು ಬೇಗ ವೀರ ಯೋಧರಿಗೆ ಬಾಲಿವುಡ್ ಸಮರ್ಪಿಸುತ್ತಿರುವ ವಿಡಿಯೋ ಬಿಡುಗಡೆಯಾಗಲಿದೆ.

Comments

Leave a Reply

Your email address will not be published. Required fields are marked *