ಕೂರ್ಮಗಡ ಬೋಟ್ ದುರಂತ- ಸಾವಿನ ಸಂಖ್ಯೆ 13ಕ್ಕೆ ಏರಿಕೆ

– ಜೀವದ ಹಂಗು ತೊರೆದು 8 ಜನರನ್ನು ರಕ್ಷಿಸಿದ ಮೀನುಗಾರರು

ಕಾರವಾರ: ಕೂರ್ಮಗಡ ಬೋಟ್ ದುರಂತದ ಸಾವಿನ ಸಂಖ್ಯೆ 9ರಿಂದ 13ಕ್ಕೆ ಏರಿಕೆಯಾಗಿದ್ದು, 8 ಜನರನ್ನು ರಕ್ಷಿಸಲಾಗಿದೆ. ಉಳಿದಂತೆ ನಾಪತ್ತೆಯಾದ ಪುಟ್ಟ ಮಕ್ಕಳು ಸೇರಿದಂತೆ 5 ಜನರ ಶೋಧಕಾರ್ಯ ಮುಂದುವರಿದಿದೆ.

ಕಾರವಾರ ಮೂಲದ ಜಯಶ್ರೀ ಕೊಠಾರಕರ್, ಗಣಪತಿ ಕೊಠಾರಕರ್, ನಿಲೇಶ್ ಪೆಡ್ನೇಕರ್, ಅಮೋಲ್ ಬೆಳಗಾವಿ, ದರ್ಶನ ಕಾರವಾರ, ಸುರೇಶ್ ಚೆಂಡಿಯಾ, ಆದರ್ಶ ಮಾಜಾಳಿ, ಶ್ರೀನಿವಾಸ ಅರಗಾ, ಚೇತನಕುಮಾರ್ ಅರಗಾ, ಹಾವೇರಿ ತಾಲೂಕಿನ ಹೊಸೂರು ಗ್ರಾಮದ ಮಂಜವ್ವ, ಇದೇ ಕುಟುಂಬದ ಬಾಲಕ ಕಿರಣ್ ಮೃತ ದುರ್ದೈವಿಗಳಾಗಿದ್ದು, ಇನ್ನೊಬ್ಬ ಮಹಿಳೆಯ ಗುರುತು ಪತ್ತೆಯಾಗಿಲ್ಲ.

ಆಗಿದ್ದೇನು?:
ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಗೆ ಸಾವಿರಾರು ಭಕ್ತರು ತೆರಳಿದ್ದರು. ಪ್ರತಿ ವರ್ಷದಂತೆ ಮೀನುಗಾರರು ನರಸಿಂಹ ದೇವರವರಿಗೆ ಯಾವುದೇ ಅನಾಹುತ ಆಗದಂತೆ ಕಾಪಾಡುವಂತೆ ಬೇಡಿಕೊಂಡು ಬೋಟ್‍ಗಳಿಗೆ ಪೂಜೆ ಸಲ್ಲಿಸುತ್ತಾರೆ. ಪೂಜೆ ಮುಗಿಸಿ ಭಕ್ತರು ವಾಪಾಸ್ ಆಗುತ್ತಿದ್ದಾಗ ಕೆಲ ಬೋಟ್ ಮಾಲೀಕರು ಹೆಚ್ಚು ಹಣ ಸಂಪಾದನೆಯ ದುರಾಸೆಗೆ ಬಿದ್ದು ಬೋಟ್‍ನ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ಕರೆತರುತ್ತಿದ್ದರು. ಅಷ್ಟೇ ಅಲ್ಲದೆ ಪ್ರಯಾಣಿಕರಿಗೆ ಲೈಫ್ ಜಾಕೇಟ್ ನೀಡದೇ ನಿಷ್ಕಾಳಜಿ ತೋರಿದ್ದಾರೆ. ಪರಿಣಾಮ 26 ಜನರು ಪ್ರಯಾಣಿಸುತ್ತಿದ್ದ ಬೋಟ್‍ವೊಂದು ಸಮುದ್ರ ಮಧ್ಯೆದಲ್ಲಿಯೇ ಮುಗುಚಿ ಬಿದ್ದಿದೆ. ತಕ್ಷಣವೇ ಬೋಟ್ ನಲ್ಲಿದ್ದ ಲೈಫ್ ಜಾಕೇಟ್ ಪಡೆದ ಕೆಲ ಪ್ರಯಾಣಿಕರು ಬದುಕುಳಿದಿದ್ದಾರೆ.

ಸಮುದ್ರದಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಜನರ ಕಿರುಚಾಟ ಕೇಳಿದ ಸ್ಥಳೀಯ ಮೀನುಗಾರರು ಸ್ಥಳಕ್ಕೆ ಆಗಮಿಸಿ 8 ಜನರನ್ನು ರಕ್ಷಿಸಿದ್ದಾರೆ. ಬಳಿಕ 13 ಜನ ಪ್ರಯಾಣಿಕರ ಮೃತ ದೇಹ ಪತ್ತೆ ಹಚ್ಚಿದ್ದಾರೆ. ಪುಟ್ಟ ಮಕ್ಕಳು ಸೇರಿದಂತೆ 5 ಜನ ಪ್ರಯಾಣಿಕರು ನಾಪತ್ತೆಯಾಗಿದ್ದು, ಕೋಸ್ಟ್‍ಗಾರ್ಡ್ ಸಿಬ್ಬಂದಿ ಮೀನುಗಾರರ ಸಹಾಯ ಪಡೆದು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ದುರಂತಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ಘಟನೆಯ ಕುರಿತು ತನಿಖೆ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *