ಸೋಮವಾರ ರಸ್ತೆಗೆ ಇಳಿಯಲ್ಲ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ಸುಗಳು

ಬೆಂಗಳೂರು: ಸೋಮವಾರ ಕಾಂಗ್ರೆಸ್ ಕರೆ ನೀಡಿದ ಭಾರತ್ ಬಂದ್‍ಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬೆಂಬಲ ನೀಡಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ನೌಕರರ ಸಂಘಟನೆ ಬೆಂಬಲ ನೀಡಿದ್ದರಿಂದ ಸಾರಿಗೆ ಸಂಚಾರ ಸ್ತಬ್ಧವಾಗಲಿದೆ.

ದಿನದಿಂದ ದಿನಕ್ಕೆ ತೈಲ ಬೆಲೆಗಳು ಗಗನಕ್ಕೇರುತ್ತಿದ್ದರೂ, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇದೇ ಸೆಪ್ಟೆಂಬರ್ 10ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಬಂದ್‍ಗೆ ಕರೆ ನೀಡಿದೆ ಎಂದು ಕಾಂಗ್ರೆಸ್ ವಕ್ತಾರೆ ರಂದೀಪ್ ಸುರ್ಜೆವಾಲಾ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲಗಳ ಬೆಲೆಗಳಿಂದಾಗಿ ಜನಸಾಮಾನ್ಯ ಸುಟ್ಟು ಹೋಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಇದರ ಬಿಸಿ ಮುಟ್ಟಿಸಲು ಇದೇ ಸೆಪ್ಟೆಂಬರ್ ದೇಶವ್ಯಾಪಿ ಪ್ರತಿಭಟನೆ ನಡೆಸಿ ಭಾರತ್ ಬಂದ್ ನಡೆಸಲಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು 11 ಲಕ್ಷ ಕೋಟಿ ರೂಪಾಯಿಯನ್ನು ಕೊಳ್ಳೆಹೊಡೆದಿದೆ. ಶೀಘ್ರವೇ ಕೇಂದ್ರ ತೆರಿಗೆ ಹಾಗೂ ಅಬಕಾರಿ ಸುಂಕವನ್ನು ರಾಜ್ಯಗಳಲ್ಲಿ ಕಡಿತಗೊಳಿಸುವಂತೆ ಆಗ್ರಹಿಸುತ್ತೇವೆ. ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಸಹ ಜಿಎಸ್‍ಟಿ ವ್ಯಾಪ್ತಿಗೆ ಒಳಪಡಿಸಬೇಕು. ಇದರಿಂದಾಗಿ ಜನಸಾಮಾನ್ಯರ ಮೇಲಿನ ಭಾರ ಕಡಿಮೆಯಾಗುತ್ತದೆ. ಭಾರತ್ ಬಂದ್‍ಗೆ ಎಲ್ಲಾ ವಿರೋಧ ಪಕ್ಷದ ನಾಯಕರು ಸಹ ಬೆಂಬಲ ನೀಡಬೇಕು. ಅಲ್ಲದೇ ಎಲ್ಲಾ ಎನ್‍ಜಿಓ ಹಾಗೂ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇನೆಂದು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *