UPSC ಪಾಸಾದ ಬಿಎಂಟಿಸಿ ಬಸ್ ಕಂಡಕ್ಟರ್‌ಗೆ ಐಎಎಸ್ ಆಗೋ ಕನಸು

– ಪ್ರತಿದಿನ 5 ಗಂಟೆಕಾಲ ಓದು
– ಕೋಚಿಂಗ್ ಪಡೆಯದೇ ಯೂಟ್ಯೂಬ್ ವಿಡಿಯೋ ನೋಡಿ ಸಾಧನೆ

ಬೆಂಗಳೂರು: ಸಾಧಿಸುವ ಛಲ, ಗುರಿ ಮುಟ್ಟಬೇಕೆಂಬ ಹಂಬಲವಿದ್ದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದೆಂಬುದನ್ನ ಬಿಎಂಟಿಸಿ ಬಸ್ ನಿರ್ವಾಹಕರೊಬ್ಬರು ಸಾಧಿಸಿ ತೋರಿಸಿದ್ದಾರೆ.

ಬಿಎಂಟಿಸಿ ಬಸ್ ನಿರ್ವಾಹಕ ಮಧು ಎನ್.ಸಿ. ಯುಪಿಎಸ್‍ಸಿ ಪರೀಕ್ಷೆಯನ್ನ ಪಾಸ್ ಮಾಡಿ ಕಷ್ಟದಿಂದ ಓದುವ ವ್ಯಕ್ತಿಗಳಿಗೆ ಮಾದರಿಯಾಗಿದ್ದಾರೆ. ನಗರದ ಡಿಪೋ ನಂಬರ್ 34ರ ಕೊತ್ತನೂರು ದಿಣ್ಣೆಯಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಧು 29ನೇ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಮಧು, 19 ವರ್ಷ ಇರುವಾಗಲೇ ಬಿಎಂಟಿಸಿಯಲ್ಲಿ ಕಂಡೆಕ್ಟರ್ ಆಗಿ ಸೇರಿಕೊಂಡರು. ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ಓದಿನ ಮೇಲಿನ ಆಸಕ್ತಿಯನ್ನು ಮಾತ್ರ ಕಳೆದುಕೊಳ್ಳಲಿಲ್ಲ. ರಾಜ್ಯಶಾಸ್ತ್ರ, ಇಂಟರ್‌ನ್ಯಾಷನಲ್ ರಿಲೇಶನ್ಸ್‌, ಎಥಿಕ್ಸ್, ಜನರಲ್ ಸ್ಟಡೀಸ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ಮಧು ಪ್ರಿಲಿಮಿನರಿ ಪರೀಕ್ಷೆಯನ್ನ 2019ರ ಜೂನ್‍ನಲ್ಲಿ ಕನ್ನಡದಲ್ಲಿ ಬರೆದು ಪಾಸಾಗಿದ್ದರು.

ನಂತರ ನಡೆದ ಐಎಎಸ್ ಮೇನ್ಸ್ ನಲ್ಲಿ ಪಾಸಾಗಿದ್ದಾರೆ. ಮಾರ್ಚ್ 25 ರಂದು ನಡೆಯುವ ಸಂದರ್ಶನವನ್ನು ಎದುರಿಸಲಿದ್ದು, ಐಎಎಸ್ ಆಗುವ ಕನಸು ಕಂಡಿದ್ದಾರೆ. ಕಂಡಕ್ಟರ್ ಮಧು ಕೆಲಸ ಮಾಡಿಕೊಂಡೆ ಡಿಸ್ಟೆನ್ಸ್ ಎಜುಕೇಶನ್ (ದೂರಶಿಕ್ಷಣ) ಮುಖಾಂತರ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನ ಪಡೆದಿದ್ದಾರೆ. 2014ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಫೇಲಾಗಿದ್ದ ಮಧು, ಬಳಿಕ 2018ರಲ್ಲಿ ಯುಪಿಎಸ್‍ಸಿ ಬರೆದಿದ್ದರು. ಆದರೆ ಆ ಪರೀಕ್ಷೆಯಲ್ಲೂ ಫೇಲ್ ಆಗಿದ್ದರು. ಹಠ ಬಿಡದೆ ಮತ್ತೆ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ಪ್ರತಿದಿನ 5 ಗಂಟೆಕಾಲ ಓದುತ್ತಿದ್ದ ಮಧು ಯಾವುದೇ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದುಕೊಂಡಿಲ್ಲ. ಯೂಟ್ಯೂಬ್ ವಿಡಿಯೋಗಳೇ ಇವರಿಗೆ ಮಾರ್ಗದರ್ಶಿಯಾಗಿವೆ.

Comments

Leave a Reply

Your email address will not be published. Required fields are marked *