ಬೆಂಗಳೂರಿನಲ್ಲಿ ಬ್ಲಾಸ್ಟ್‌ ಪ್ರಕರಣ- ನಾಲ್ವರ ವಶಕ್ಕೆ ಪಡೆದು ವಿಚಾರಣೆ

– ಕೇರಳ, ತಮಿಳುನಾಡಿನಲ್ಲಿಯೂ ಶೋಧ

ಬೆಂಗಳೂರು: ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಒಂದಾಗಿರುವ ಬ್ರೂಕ್‌ಫೀಲ್ಡ್‌ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಶಂಕಿತ ಆರೋಪಿಯ ಫೋಟೋ ಹಾಗೂ ವೀಡಿಯೋ ಸಿಕ್ಕ ಬೆನ್ನಲ್ಲೇ ಈತನನ್ನೇ ಹೋಲುವ ನಾಲ್ವರು ವ್ಯಕ್ತಿಗಳನ್ನು ತಡರಾತ್ರಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸ್ಥಳದಲ್ಲಿ ಸಿಕ್ಕ ಸಿಸಿಟಿವಿ, ಟವರ್ ಲೋಕೇಷನ್ ಹಾಗೂ ಪೊಲೀಸರ ಶಂಕೆ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ.

ಕೇರಳ, ತಮಿಳುನಾಡಿನಲ್ಲಿ ಶೋಧ: ಪ್ರಕರಣ ಸಂಬಂಧ ಸದ್ಯ 10 ತಂಡಗಳಿಂದ ತೀವ್ರ ತನಿಖೆ ನಡೆಯುತ್ತಿದೆ. ಬ್ಲಾಸ್ಟ್‌ (Bengaluru Blast) ಪ್ರಕರಣ ಸಂಬಂಧ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಆರೋಪಿಗಾಗಿ ತೀವ್ರ ಶೋಧಕಾರ್ಯ ನಡೆಸಲಾಗುತ್ತಿದೆ. ಶುಕ್ರವಾರ ಸಂಜೆಯೇ ತನಿಖಾ ತಂಡ ತಮಿಳುನಾಡು ಹಾಗೂ ಕೇರಳಾಗೆ ಹೋಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

ಈ ಹಿಂದಿನ ಬಾಂಬ್ ಬ್ಲಾಸ್ಟ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ. ರಾಮೇಶ್ವರ ಕೆಫೆಯ ಪ್ರಮುಖ ಬ್ರಾಂಚ್ ತಮಿಳುನಾಡು ಇದೆ. ಹೀಗಾಗಿ ಅಲ್ಲಿಯೂ ಆಡಳಿತ ಮಂಡಳಿಯ ಕೆಲ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರವೆ ಇಡ್ಲಿ ತಿಂದ ಬಾಂಬ್‌ ಇಟ್ಟು ಹೋದ: ತನ್ನ ಚಹರೆ ಎಲ್ಲೂ ಬೀಳದಿರಲಿ ಅಂತಾ ಶಂಕಿತ ಉಗ್ರ ಮುಖಕ್ಕೆ ಮಾಸ್ಕ್ ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆ ಮೇಲೆ ವೈಟ್ ಹ್ಯಾಟ್ ಹಾಕಿಕೊಳ್ಳುವ ಮೂಲಕ ಮೊದಲೇ ಪ್ರೀ ಪ್ಲಾನ್ ಮಾಡಿಕೊಂಡು ಕೆಫೆಗೆ ಎಂಟ್ರಿ ಕೊಟ್ಟಿದ್ದಾನೆ. ಜೊತೆಗೆ ಬಲಭುಜದ ಹಿಂಬದಿಗೆ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಹೋಟೆಲ್ ಗೆ ಬಂದಿರುವ ಆರೋಪಿ ಹೋಟೆಲ್ ನಲ್ಲಿ ತಿಂಡಿ ತಿಂದು ಸಾಗುವ ಎಕ್ಸ್ ಕ್ಲೂಸಿವ್ ಫೋಟೋ ಹಾಗೂ ವೀಡಿಯೋಗಳು ಸಿಕ್ಕಿದೆ.

ಟೋಕನ್ ತೆಗೆದುಕೊಂಡ ಶಂಕಿತ ರವೆ ಇಡ್ಲಿ ತಿಂದು ಹ್ಯಾಡ್ ವಾಶಿಂಗ್‌ಗೆ ಹೋಗಿದ್ದಾನೆ. ಹ್ಯಾಂಡ್ ವಾಶ್ ಮಾಡಿ ಬ್ಯಾಗ್ ಅಲ್ಲೇ ಇಟ್ಟು ಬೈಕ್‌ನಲ್ಲಿ ತೆರಳಿದ್ದಾನೆ. ಆತ ಹೋದ ಸುಮಾರು ಒಂದು ಗಂಟೆಯ ಬಳಿಕ ಈ ಬ್ಯಾಗ್‌ ಬ್ಲಾಸ್ಟ್‌ ಆಗಿದೆ. ಸದ್ಯ ಬೈಕ್ ಮಾಲೀಕ ಯಾರು..? ಬೈಕ್ ಎಲ್ಲಿನದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಡೆದಿದ್ದೇನು..?: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ 05 ನಿಮಿಷ ಸುಮಾರಿಗೆ ನಡೆದ ಘಟನೆಯಲ್ಲಿ ಕೆಲವರು ಗಾಯಗೊಂಡು ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರೀ ಸ್ಫೋಟದ ಪರಿಣಾಮ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಘಟನೆ ನಡೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸಿಲಿಂಡರ್‌ ಸ್ಫೋಟದಿಂದ ಘಟನೆ ನಡೆದಿದೆ ಎನ್ನಲಾಗಿತ್ತು. ಆದರೆ ಇದೀಗ ಬಾಂಬ್‌ ಬ್ಲಾಸ್ಟ್‌ ಆಗಿರುವುದು ಬಯಲಾಗಿದೆ.