ಮಾಟಮಂತ್ರಕ್ಕೆ ಹೆದರಿ, 33 ತೊಲ ಚಿನ್ನ ಕದ್ದ ಕಳ್ಳಿಯರನ್ನ ಬಂಧಿಸಲು ಹಿಂದೇಟು ಹಾಕ್ತಿರೋ ಪೊಲೀಸರು!

ಹೈದರಾಬಾದ್: ಇಬ್ಬರು ಕಳ್ಳಿಯರನ್ನು ಬಂಧಿಸುವ ಬಗ್ಗೆ ಪೊಲೀಸರು ಹಿಂದೇಟು ಹಾಕುತ್ತಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಮಲ್ಕಾಜಿಗಿರಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ಜಿ. ರಾಘವಲು ಅವರ ಮನೆಯಲ್ಲಿ ಬಾಡಿಗೆಗಿದ್ದ ಹರಿಯಾಣ ಮೂಲದ ಇಬ್ಬರು ಮಹಿಳೆಯರು ಕಳ್ಳತನ ಮಾಡಿದ್ದರು. ಕುಟುಂಬದ ಸದಸ್ಯರಿಗೆ ಡ್ರಗ್ಸ್ ನೀಡಿ 2013ರ ನವೆಂಬರ್ ನಲ್ಲಿ ಮನೆಯಿಂದ 33 ತೊಲ ಚಿನ್ನವನ್ನು ಲೂಟಿ ಮಾಡಿ ಪರಾರಿಯಾಗಿದ್ದರು.

ಈ ಘಟನೆ ಸಂಬಂಧ ಮಲ್ಕಾಜಿಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಘವುಲು ಅವರ ಪತ್ನಿ ಜಿ. ಅಂಜಮ್ಮ ಅವರು ಆರೋಪಿಗಳಾದ ಗಿನ್ನಿ ಮತ್ತು ಜ್ಯೋತಿಯ ವಿಳಾಸ ಮತ್ತು ವಿವರಗಳನ್ನು ನೀಡಿದ್ದರೂ, ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಬಂಧಿಸಲು ಪೊಲೀಸರು ಭಯಪಡುತ್ತಿದ್ದಾರೆ.

ಆರೋಪಿಗಳಲ್ಲೊಬ್ಬಳು ಮಾಟ ಮಂತ್ರದಲ್ಲಿ ಪರಿಣಿತಳಾಗಿದ್ದು, ಅನೇಕ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ರು. ಆರೋಪಿಗಳನ್ನು ಬಂಧಿಸಿದ್ರೆ ಆಕೆ ಪೊಲೀಸರ ಮೇಲೆ ಮಾಟಮಂತ್ರ ಮಾಡಿ ಅವರಿಗೆ ಹಾನಿ ಉಂಟುಮಾಡಬಹುದು ಎಂದು ಭಯಪಡ್ತಿದ್ದಾರೆ ಅಂತ ಅಂಜಮ್ಮ ಹೇಳಿದ್ದಾರೆ.

ಪೋಲಿಸರ ಸುಳ್ಳು ಭರವಸೆಗಳಿಂದ ಬೇಸತ್ತ ಅಂಜಮ್ಮ ರಾಚಕೊಂಡ ಕಮಿಷನರ್ ಮಹೇಶ್ ಭಾಗವತಮ್ ಬಳಿ ಹೋಗಿ ಶೀಘ್ರವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಕೂಡ ಶೀಘ್ರ ತನಿಖೆಯ ಭರವಸೆ ನೀಡಿದ್ದಾರೆ.

ಒಂದು ರಾತ್ರಿ ಗಿನ್ನಿ ಮತ್ತು ಜ್ಯೋತಿ ಬಂದು ನಮ್ಮ ಕುಟುಂಬದವರಿಗೆ ವಿಶೇಷ ಊಟವನ್ನು ನೀಡಿ ತಿನ್ನಲು ಒತ್ತಾಯಿಸಿದರು. ಅದನ್ನು ತಿಂದ ತಕ್ಷಣ ಕುಟುಂಬದ ಸದಸ್ಯರು ನಿದ್ದೆ ಮಾಡಿದೆವು. ಸ್ವಲ್ಪ ಸಮಯದ ನಂತರ ಎಚ್ಚರಗೊಂಡಾಗ ಚಿನ್ನದ ಆಭರಣಗಳ ಜೊತೆಗೆ ಮಹಿಳೆಯರು ಪರಾರಿಯಾಗಿದ್ದರು. ಪೊಲೀಸರು ಅನೇಕ ಬಾರಿ ಹರಿಯಾಣಕ್ಕೆ ಹೋಗಿದ್ದಾರೆ. ಆದರೆ ಅವರನ್ನು ಬಂಧಿಸದೆ ವಾಪಸ್ ಆಗಿದ್ದಾರೆ ಎಂದು ಅಂಜಮ್ಮ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *