SSLC ಪರೀಕ್ಷಾರ್ಥಿ ಫೋಟೋ ಇಟ್ಟು ತಿಥಿ ಮಾಡಿದ ದುಷ್ಕರ್ಮಿಗಳು!

ವಿಜಯಪುರ: ಇಂದಿನಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದ್ದು, ಈ ನಡುವೆ ದುಷ್ಕರ್ಮಿಗಳು ವಿಕೃತಿ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಹೌದು. ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಯ ಫೋಟೋಗೆ ತಿಥಿ ಪೂಜೆ ಮಾಡಿದ್ದಾರೆ. ಈ ಮೂಲಕ ವಾಮಾಚಾರ ಮಾಡಿರೋ ಶಂಕೆ ವ್ಯಕ್ತವಾಗಿದೆ. ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ 50 ಬದಿಯಲ್ಲಿ ಈ ಘಟನೆ ನಡೆದಿದೆ.

ಸಚಿನ್ ನಾಯಕ ಎಂಬ ವಿದ್ಯಾರ್ಥಿಯ ಫೋಟೋಗೆ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು, ಗಡಿಗೆ ಇಟ್ಟು, ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ಇಟ್ಟು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಘಟನೆಯಿಂದ ವಿದ್ಯಾರ್ಥಿ ಭಯಗೊಂಡಿದ್ದಾನೆ. ಅಲ್ಲದೆ ಆತನ ಪೋಷಕರು ಕೂಡ ಭಯದಿಂದಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆಗೆ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಪರೀಕ್ಷಾ ಸಿಬ್ಬಂದಿಯಿಂದ ಮನವೊಲಿಕೆ

ನಮ್ಮ ಮಗನ ಫೋಟೋ ಇಟ್ಟು ಈ ರೀತಿ ದುಷೃತ್ಯವೆಸಗಿದವರ ಪತ್ತೆ ಮಾಡಬೇಕೆಂದು ಸಚಿನ್ ಪೋಷಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಇತ್ತ ಸಚಿನ್ ಆತಂಕದಿಂದಲೇ ಪರೀಕ್ಷೆಗೆ ತೆರಳಿದ್ದಾನೆ. ವಿಜಯಪುರ ನಗರದ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿರುವ ಸಚಿನ್‍ಗೆ ಬೆಂಗಾವಲಾಗಿ ತಾತ ಗಂಗಾರಾಮ ಮತ್ತು ಸಹೋದರ ಅರವಿಂದ ತೆರಳಿದ್ದಾರೆ. ಈ ವೇಳೆ ಗಂಗಾರಾಮಗೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ.

ಸಚಿನ್ ಮೇಲೆ ನಡೆದಿರುವ ತಿಥಿ ಕಾರ್ಯ ಹಾಗೂ ವಾಮಾಚಾರ ಇದು ಎರಡನೇ ಬಾರಿಯಾಗಿದೆ. ಹೀಗಾಗಿ ಕುಟುಂಬ ತೀವ್ರ ಆತಂಕದಲ್ಲಿದ್ದು, ಈ ಬಗ್ಗೆ ಗಂಗಾರಾಮ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಹಾವೇರಿಯಲ್ಲಿ ಹಿಜಬ್ ತೆಗೆದು SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು

Comments

Leave a Reply

Your email address will not be published. Required fields are marked *