ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಹೇಗೆ: ಬಿ.ಎಲ್ ಸಂತೋಷ್ ಪ್ರಶ್ನೆ

ಚಾಮರಾಜನಗರ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಸ್ತಕ್ಷೇಪವಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಪಾರ್ಟಿ ಮೆಂಬರ್ ಸ್ಲಿಪ್‍ಗೆ ಬೆಲೆ ಬೇಕಲ್ಲ ಎಂದು ಪರೋಕ್ಷವಾಗಿ ಹೇಳುವ ಮೂಲಕ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದೆ ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ.

ಚಾಮರಾಜನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಲ್.ಸಂತೋಷ್, ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟಿದ ಇಬ್ಬರಲ್ಲಿ ದಿವಂಗತ ಅನಂತ್‍ಕುಮಾರ್ ಸಹ ಒಬ್ಬರು. ಅನಂತ್‍ಕುಮಾರ್ ಅವರಿಗೆ ಏನು ಕ್ರೆಡಿಟ್ ಕೊಡಬೇಕು ಅದನ್ನು ಸಂಘ ಪರಿವಾರ ಹಿಂದಿನಿಂದಲೂ ಕೊಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಕೊಡುತ್ತದೆ. ಅದೇ ಕ್ರೆಡಿಟ್ ಅವರ ಹೆಂಡತಿ ತೇಜಸ್ವಿನಿ ಪಡೆದುಕೊಳ್ಳಬೇಕೆಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

20-30 ವರ್ಷ ಪಾರ್ಟಿ ರಾಜಕಾರಣದಲ್ಲಿ ಮುಂದುವರಿಯಲು ಸಾಮರ್ಥ್ಯ ಇರುವವರಿಗೆ ಟಿಕೆಟ್ ಕೊಟ್ಟಿದ್ದೇವೆ. ಸದ್ಯ ಟಿಕೆಟ್ ಪಡೆದವರು ತಮ್ಮ ಸಾಮರ್ಥ್ಯವನ್ನು ಮುಂದಿನ ಐದು ವರ್ಷಗಳಲ್ಲಿ ಸಾಬೀತು ಮಾಡಬೇಕಾಗುತ್ತದೆ. ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಹೇಳುವುದು ಸರಿಯಲ್ಲ. ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿಸಲು ಯಾರಿಗೂ ಅಗೌರವ ಸೂಚಿಸದೇ ಯುವಕರಿಗೆ ಟಿಕೆಟ್ ನೀಡಲಾಗಿದೆ. ಜೀನ್ಸ್, ಡಿಎನ್‍ಎ ಆಧಾರದ ಮೇಲೆ ಟಿಕೆಟ್ ನೀಡಿ ಎಂದು ಎಲ್ಲರೂ ಕೇಳಿದರೆ ಪಾರ್ಟಿಯ ಮೆಂಬರ್ ಶಿಪ್ ರಶೀದಿಗೆ ಬೆಲೆ ಇರಲ್ಲ. ಹಾಗಾಗಿ ಪಕ್ಷ ಎಲ್ಲರನ್ನೂ ಗೌರವದಿಂದ ನೋಡಿ ಸೂಕ್ತ ಸ್ಥಾನಮಾನಗಳನ್ನು ನೀಡುತ್ತಿದೆ ಎಂದರು.

ಸದ್ಯ ತೇಜಸ್ವಿನಿ ಅವರ ಗೌರವ ಮತ್ತು ಸಾಮರ್ಥ್ಯವನ್ನು ಲೆಕ್ಕ ಹಾಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನೀಡಿರುವ ಅವಕಾಶ ಬಳಸಿಕೊಂಡು ತಮ್ಮನ್ನು ತಾವು ಪಕ್ಷದಲ್ಲಿ ಗುರುತಿಸಿಕೊಳ್ಳಬಹುದು. ಟಿಕೆಟ್ ನೀಡಿದ್ರೆ ಗೌರವ, ನೀಡಲ್ಲ ಅಂದ್ರೆ ಅಗೌರವ ಎಂದು ಹೇಳೋದು ತಪ್ಪಾಗುತ್ತದೆ. ಈ ರೀತಿ ಟಿಕೆಟ್ ನೀಡುವುದು ಪಕ್ಷಕ್ಕೆ ತುಂಬಾನೇ ಅಪಾಯಕಾರಿ. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಪಕ್ಷದಲ್ಲಿ ಅವರು ಬೆಳೆಯಬಹುದು ಎಂದು ಹೇಳುವ ಮೂಲಕ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿದ್ದನ್ನು ಬಿ.ಎಲ್.ಸಂತೋಷ್ ಸಮರ್ಥಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *