ಚಂಡೀಗಢ ಮೇಯರ್ ಸ್ಥಾನಕ್ಕೆ ಬಿಜೆಪಿಯ ಮನೋಜ್ ಸೋಂಕರ್ ರಾಜೀನಾಮೆ

ಚಂಡೀಗಢ: ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತುಕೊಂಡ ಸಂದರ್ಭದಲ್ಲಿ ಹೊಸದಾಗಿ ಆಯ್ಕೆಯಾಗಿ ಚಂಡೀಗಢ ಮೇಯರ್‌ (Chandigarh Mayor) ಮನೋಜ್‌ ಸೋಂಕರ್‌ (Manoj Sonkar) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೇಯರ್ ಚುನಾವಣೆ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಜಿತೇಂದ್ರ ಮಲ್ಹೋತ್ರಾ ಹೇಳಿದ್ದಾರೆ. ಇದನ್ನೂ ಓದಿ: 400 ಸ್ಥಾನಕ್ಕೆ ಮುಂದಿನ 100 ದಿನದ ಟಾರ್ಗೆಟ್ – ಕಾರ್ಯಕರ್ತರಿಗೆ ಹೊಸ ಟಾಸ್ಕ್ ನೀಡಿದ ಪ್ರಧಾನಿ ಮೋದಿ

ಮೂರು ವಿರೋಧ ಪಕ್ಷದ ಎಂಸಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಗುಸುಗುಸು ಇರುವಾಗಲೇ ರಾಜೀನಾಮೆ ನೀಡಲಾಗಿದೆ. ಚಂಡೀಗಢದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂದು ಈ ಹಿಂದೆ ವರದಿಗಳು ಬಂದಿದ್ದವು. ಎಎಪಿಯ ಮೂವರು ಕೌನ್ಸಿಲರ್‌ಗಳು ಬಿಜೆಪಿ ಸೇರಬಹುದು. ಬಿಜೆಪಿ ಸೇರುವ ಸಾಧ್ಯತೆಯಿರುವವರಲ್ಲಿ ಪೂನಂ, ನೇಹಾ ಮುಸಾವತ್ ಮತ್ತು ಗುರುಚರಣ್ ಸಿಂಗ್ ಕಾಲಾ ಹೆಸರುಗಳ ಬಗ್ಗೆ ತೀವ್ರ ಚರ್ಚೆ ನಡೆದಿತ್ತು.

ವಿವಾದ ಏನು?
ಚಂಡೀಗಢ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಮೇಯರ್‌, ಹಿರಿಯ ಉಪಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಪ್ರತಿನಿಧಿಸಿದ್ದ ಎಎಪಿ ಮತ್ತು ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರ್ಪಡೆ?

ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ, ವಂಚನೆ ನಡೆದಿದೆ ಎಂದು ಆರೋಪಿಸಿ ಎಎಪಿ ಆರೋಪಿಸಿತ್ತು. ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಎಂದು ಕೋರ್ಟ್‌ ಮೊರೆ ಹೋಗಿತ್ತು. ಚುನಾವಣೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು.