ವರದಿಗಾರಿಕೆ ಶೈಲಿಯನ್ನು ಬದಲಿಸಿಕೊಳ್ಳಿ, ಇಲ್ಲವೇ ನಿಮಗೆ ಸಾವೇ ಗತಿ- ಬಿಜೆಪಿ ಶಾಸಕ ಲಾಲ್ ಸಿಂಗ್ ಆವಾಜ್

ಶ್ರೀನಗರ: ವರದಿಗಾರಿಕೆ ಶೈಲಿಯನ್ನು ಬದಲಿಸಿಕೊಳ್ಳಿ ಇಲ್ಲವಾದರೆ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಸುಜಾತ್ ಬುಖಾರಿಗೆ ಆದ ಗತಿಯೇ ನಿಮಗೂ ಆಗುತ್ತೆ ಎಂದು ಜಮ್ಮು ಕಾಶ್ಮೀರ ಸರ್ಕಾರದ ಮಾಜಿ ಸಚಿವ, ಬಿಜೆಪಿ ಶಾಸಕ ಚೌಧರಿ ಲಾಲ್ ಸಿಂಗ್‍ಗೆ ಪತ್ರಕರ್ತರಿಗೆ ಆವಾಜ್ ಹಾಕಿದ್ದಾರೆ.

ಶನಿವಾರದಂದು ಜಮ್ಮುವಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಿಮ್ಮ ಬದುಕು ಹಾಗೂ ಬರವಣಿಗೆಯ ನಡುವೆ ನಿರ್ದಿಷ್ಟವಾದ ಗೆರೆಯನ್ನು ಎಳೆದುಕೊಳ್ಳಿ. ನಿಮ್ಮ ಬರವಣಿಗೆ ಶೈಲಿಯನ್ನು ಬದಲಿಸಿಕೊಳ್ಳಿ. ಪತ್ರಕರ್ತ ಸುಜಾತ್ ಬುಖಾರಿ ಸ್ಥಿತಿ ತಂದುಕೊಳ್ಳಬೇಡಿ ಎಂದು ಪತ್ರಕರ್ತರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.

ಈ ಹಿಂದೆ ಜಮ್ಮು ಕಾಶ್ಮೀರದ ಕಠುವಾದಲ್ಲಿ ಕುರಿ ಕಾಯುವ 8ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಅದನ್ನು ಮಾಧ್ಯಮಗಳು ಕಟುವಾಗಿ ಟೀಕಿಸಿ ವರದಿ ಮಾಡಿದ್ದವು. ಈ ಸಂದರ್ಭದಲ್ಲಿ ಆರೋಪಿಗಳ ಪರವಾಗಿ ಮಾತನಾಡಿದ್ದಕ್ಕೆ ಅವರನ್ನು ಸಂಪುಟದಿಂದ ಕಿತ್ತು ಹಾಕಲಾಗಿತ್ತು.

ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ಪರವಾಗಿ, ಅವರನ್ನು ಬಿಡುಗಡೆ ಮಾಡುವಂತೆ ಪಿಡಿಪಿ ಬಿಜೆಪಿ ಸರ್ಕಾರದ ಅರಣ್ಯ ಸಚಿವರಾಗಿದ್ದ ಚೌಧರಿ ಲಾಲ್ ಸಿಂಗ್ ಮಾತನಾಡಿದ್ದರು. ಅಲ್ಲದೇ ಆರೋಪಿಗಳ ಬಿಡುಗಡೆ ಮಾಡುವಂತೆ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಇದನ್ನು ಗಂಭೀವಾಗಿ ಪರಿಗಣಿಸಿ ಸರಕಾರ ಅವರನ್ನು ಸಂಪುಟದಿಂದ ವಜಾಗೊಳಿಸಿತ್ತು.

ಇನ್ನು ಈ ಘಟನೆಯನ್ನು ಕುರಿತಂತೆ ಪ್ರತಿಕ್ರಿಯೆಸಿರುವ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಸುಜಾತ್ ಹತ್ಯೆಯು ಪತ್ರಕರ್ತರನ್ನು ಬೆದರಿಸುವ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ವಿಷಾದನೀಯ ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *