ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಮಲೋತ್ಪತ್ತಿ – I.N.D.I.A ಒಕ್ಕೂಟಕ್ಕೆ ಭಾರೀ ಮುಖಭಂಗ

ಚಂಡೀಗಢ: ಸಾರ್ವತ್ರಿಕ ಚುನಾವಣೆ ಸನಿಹದಲ್ಲಿ ವಿಪಕ್ಷಗಳ ಒಕ್ಕೂಟ I.N.D.I.Aಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಮೊದಲ ಪರೀಕ್ಷೆ ಎಂದೇ ಭಾವಿಸಿದ್ದ ಚಂಡೀಗಢ ಮೇಯರ್ ಚುನಾವಣೆಯಲ್ಲಿ (Chandigarh Mayor Elections) I.N.D.I.A ಒಕ್ಕೂಟಕ್ಕೆ ಸೋಲಾಗಿದ್ದು, ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸಿ, ಅಧಿಕಾರದ ಗದ್ದುಗೆ ಏರಿದೆ.

ಈ ಚುನಾವಣೆಗಾಗಿ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ (AAP – Congress) ಮೈತ್ರಿಯಾಗಿ ಸ್ಪರ್ಧಿಸಿದ್ದವು. ಮೇಯರ್ ಹುದ್ದೆಗೆ ಎಎಪಿ, ಉಪ ಮೇಯರ್ ಹುದ್ದೆಗೆ ಕಾಂಗ್ರೆಸ್ ಸ್ಪರ್ಧೆ ಮಾಡಿತ್ತು. ಆದ್ರೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ (BJP Candidate) ಗೆಲುವು ಸಾಧಿಸಿದ್ದು, ನಾಯಕರಿಗೆ ಶಾಕ್‌ ಕೊಟ್ಟಂತಾಗಿದೆ. ಬಿಜೆಪಿ ಅಭ್ಯರ್ಥಿ ಮನೋಜ್‌ ಸೋಂಕರ್‌ ಅವರು ಆಪ್‌ ಅಭ್ಯರ್ಥಿ ಕುಲದೀಪ್‌ ಕುಮಾರ್‌ರನ್ನ ಸೋಲಿಸಿ ಅಧಿಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಸೋಂಕರ್‌ 16 ಮತಗಳನ್ನು ಪಡೆದರೆ, ಕುಮಾರ್‌ 12 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.

ಭಾರೀ ಹೈಡ್ರಾಮಾ: 
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎಎಪಿ ಹಾಗೂ ಕಾಂಗ್ರೆಸ್‌ ನಾಯಕರಿಂದ ಭಾರೀ ಹೈಡ್ರಾಮಾ ನಡೆದಿದೆ. ಬಿಜೆಪಿ 13 ಕೌನ್ಸಿಲರ್‌ ಸದಸ್ಯತ್ವ ಬಲ ಹೊಂದಿತ್ತು, ಕಾಂಗ್ರೆಸ್‌ 7 ಹಾಗೂ ಎಎಪಿ 13 ಸದಸ್ಯರ ಬಲ ಹೊಂದಿತ್ತು. ಚುನಾವಣಾಧಿಕಾರಿಗಳು 8 ಮತಗಳನ್ನು ಅಮಾನ್ಯವೆಂದು ಘೋಷಿಸಿದ್ದರಿಂದ ಮೈತ್ರಿಕೂಟಕ್ಕೆ ಸೋಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸಹ ಬಿಜೆಪಿ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.

ಮೇಯರ್‌ ಚುನಾವಣೆಯಲ್ಲಿ ಈ ಮಟ್ಟಕ್ಕಿಳಿಯಲು ಸಾಧ್ಯವಾದರೆ, ರಾಷ್ಟ್ರೀಯ ಚುನಾವಣೆಯಲ್ಲಿ ಯಾವುದೇ ಮಟ್ಟಕ್ಕೆ ಹೋಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮಗೆ ನಿತೀಶ್‌ ಕುಮಾರ್‌ ಅಗತ್ಯವಿಲ್ಲ: ಮೈತ್ರಿ ಮುರಿದ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

ಕೋರ್ಟ್‌ ಮೆಟ್ಟಿಲೇರಿದ ಆಪ್‌:
ಮೇಯರ್‌ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಎಎಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ತುರ್ತು ವಿಚಾರಣೆಗಾಗಿ ಕುಲದೀಪ್‌ ಕುಮಾರ್ ಅವರ ಮನವಿಯನ್ನು ಉಲ್ಲೇಖಿಸಿದ್ದಾರೆ. ಯಾವುದೇ ಕಾರಣ ನೀಡದೇ 8 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ. ಆದ್ದರಿಂದ ಈ ಚುನಾವಣೆ ದಾಖಲೆಗಳನ್ನು ಸೀಲ್‌ ಮಾಡುವಂತೆ ಒತ್ತಾಯಿಸಿದ್ದಾರೆ. ಹೈಕೋರ್ಟ್‌ ಬುಧಾವಾರಕ್ಕೆ (ಜ.31) ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಬಿಜೆಪಿ ಮುಖಂಡನ ಹತ್ಯೆ: 15 ಪಿಎಫ್‌ಐ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್