ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸಿನಿಮಾ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಪ್ರಮುಖರನ್ನು ಅಖಾಡಕ್ಕೆ ಇಳಿಸಲು ಚಿಂತನೆ ನಡೆಸಿದೆ.
ಈಗಾಗಲೇ ಪ್ರಮುಖ ಸಿನಿಮಾ ನಟರಾದ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಮೋಹನ್ ಲಾಲ್, ಮಾಧುರಿ ದೀಕ್ಷಿತ್ ಹಾಗೂ ಕ್ರೀಡಾ ವಿಭಾಗದಿಂದ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್‍ರವರನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಸುವ ಕುರಿತು ಬಿಜೆಪಿ ಚಿಂತನೆ ನಡೆಸಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಇವರಲ್ಲದೇ ಬಿಜೆಪಿಯು ಸಿನಿಮಾ, ಕಲೆ, ಸಂಸ್ಕೃತಿ, ಕ್ರೀಡೆ, ಮಾಧ್ಯಮ, ಆರೋಗ್ಯ ಸೇವೆ ಸೇರಿದಂತೆ ಇತೆರೆ ಕ್ಷೇತ್ರಗಳಲ್ಲಿ ಹೆಸರುಗಳಿಸಿರುವ ಪ್ರಮುಖ ವೃತ್ತಿಪರರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಈ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು ಸ್ವತಂತ್ರವಾಗಿ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರನ್ನು ರಾಜಕೀಯದಲ್ಲಿ ಬೆಳೆಸಿದರೆ, ಪಕ್ಷಕ್ಕೆ ಹೆಚ್ಚಿನ ಲಾಭವಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
ಈಗಾಗಲೇ ಅಕ್ಷಯ್ ಕುಮಾರ್‌ರವರನ್ನು ದೆಹಲಿಯಿಂದ, ಸನ್ನಿ ಡಿಯೋಲ್‍ರನ್ನು ಗುರುದಾಸ್ ಪುರದಿಂದ, ಮಾಧುರಿ ದೀಕ್ಷಿತ್‍ರನ್ನು ಮುಂಬೈನಿಂದ ಹಾಗೂ ಮೋಹನ್‍ಲಾಲ್ ಅವರನ್ನು ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ತಮ್ಮ ಸೇವಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಪ್ರಮುಖರನ್ನು ರಾಜಕೀಯಕ್ಕೆ ತರಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಅಭಿಲಾಷೆಯಾಗಿದೆ. ಅಲ್ಲದೇ ಆಡಳಿತ ವಿರೋಧಿ ಅಲೆ ಇರುವ ಕಡೆ ಇಂತಹವರಿಗೆ ಅವಕಾಶ ಕೊಟ್ಟರೆ ಪಕ್ಷಕ್ಕೆ ಲಾಭವಾಗಲಿದೆ ಎನ್ನುವ ದೂರದೃಷ್ಟಿಯನ್ನು ಬಿಜೆಪಿ ಹಾಕಿಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply