ಬಿಜೆಪಿಯಲ್ಲಿ ಮತ್ತೆ ರಾಯಣ್ಣ ಬ್ರಿಗೆಡ್ ಕಹಳೆ – ಬಿಳಕಿ ಮಾತಿಗೆ ನೊಂದು ಈಶ್ವರಪ್ಪ ಕಣ್ಣೀರು

ಶಿವಮೊಗ್ಗ/ಬೆಂಗಳೂರು: ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಹೊಗೆ ಕಾಣಿಸಿಕೊಂಡಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವಪ್ಪ ಅವರು ತಮ್ಮ ಮೇಲಿನ ವಿರೋಧಿ ಬಣ ನಾಯಕರ ಹೇಳಿಕೆ ನೆನೆದು ಕಣ್ಣೀರಿಟ್ಟಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಮುಖಂಡ ಬಿಳಕಿ ಕೃಷ್ಣಮೂರ್ತಿ, ಈಶ್ವರಪ್ಪ ಅವರಿಗೆ ಟಿಕೆಟ್ ನೀಡಿದರೆ ಠೇವಣಿ ಸಹ ಉಳಿಯುವುದಿಲ್ಲ ಎಂದಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಲು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ, ನನ್ನ ಜೀವಮಾನದಲ್ಲಿ ಇಂಥ ಮಾತು ಕೇಳಿರಲಿಲ್ಲ. ನನಗೆ ಅವಮಾನ ಆಗಿದೆ. ಇಂಥ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಭಾವೋದ್ವೇಗಕ್ಕೆ ಒಳಗಾಗಿ ಪತ್ರಿಕಾಗೋಷ್ಠಿ ಮೊಟಕುಗೊಳಿಸಿದರು.

ಬಿಜೆಪಿ ನಾಯಕರ ನಡುವಿನ ಈ ವೈಮನಸ್ಸು ಕಾರ್ಯಕರ್ತರನ್ನೂ ತಲುಪಿದೆ. ಇಂದು ಬಿಜೆಪಿ ಕಚೇರಿಯಲ್ಲಿ ಸೇರಿದ್ದ ಕಾರ್ಯಕರ್ತರು, ಈಶ್ವರಪ್ಪ ಅವರಿಗೆ ಟಿಕೆಟ್ ನೀಡದಿದ್ದರೆ ಕುತ್ತಿಗೆ ಕಾಯ್ದುಕೊಳ್ಳುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಈಶ್ವರಪ್ಪ ಅವರೇ ಮುಂದಿನ ಶಾಸಕರು ಎಂದು ಘೋಷಣೆ ಕೂಗಿದ್ದಾರೆ. ಇದರೊಂದಿಗೆ ರಾಜ್ಯ ಬಿಜೆಪಿ ನಾಯಕರಲ್ಲಿ ಟಿಕೆಟ್ ಹಂಚಿಕೆ ನೀಡುವ ಕುರಿತು ಇನ್ನು ಒಮ್ಮತ ಮೂಡಿಲ್ಲ ಎಂದಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಎಸ್‍ವೈ, ಈಶ್ವರಪ್ಪ ಅವರಿಗೆ ಟಿಕೆಟ್ ನಾನು ನೀಡಲ್ಲ. ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತಾರೆ. ಪಕ್ಷದಲ್ಲಿ ಸುಮ್ಮನೇ ಅನಗತ್ಯ ಗೊಂದಲ ಸೃಷ್ಟಿ ಮಾಡುವುದು ಬೇಡ. ರುದ್ರೇಗೌಡ ಹಾಗೂ ಅವರ ಬೆಂಬಲಿಗರಿಗೂ ನಾನು ಇದನ್ನೇ ಹೇಳಿದ್ದೇನೆ ಎಂದರು.

ಈ ವೇಳೆ ರಾಯಣ್ಣ ಬ್ರಿಗೇಡ್ ಗೆ ಸಂಬಂಧಿಸಿದಂತೆ ಪ್ರಕಟಗೊಂಡಿರುವ ಫೇಸ್ ಬುಕ್ ಪೋಸ್ಟಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *