ಹೋಗ್ಬಿಡ್ತೀನಿ, ಹೋಗ್ಬಿಡ್ತೀನಿ ಅಂತ ಸಿಎಂ ಕುರ್ಚಿಲೀ ಕುತ್ಕೋಂಡು, ಈವಾಗ್ಲೂ ಹೋಗ್ಬಿಡ್ತೀನಿ ಅಂತಾ ಕಣ್ಣೀರು ಹಾಕ್ತಿದ್ದಾರೆ: ತಾರಾ

ಶಿವಮೊಗ್ಗ: ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭಾ ಚುನಾವಣೆಗೂ ಮುನ್ನಾ ನಾನು ಹೋಗಿಬಿಡುತ್ತೀನಿ ಮತ ಹಾಕಿ ಅಂದು, ಇವಾಗ ಸಿಎಂ ಆದ ಮೇಲೆಯೂ ಸಹ ನಾನು ಹೋಗಿಬಿಡುತ್ತೀನಿ ಅಂತಾ ಕಣ್ಣೀರು ಹಾಕುತ್ತಿದ್ದಾರೆ ಎಂದು ನಟಿ ಹಾಗೂ ಬಿಜೆಪಿ ನಾಯಕಿ ತಾರಾ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ವಿಧಾನಸಭಾ ಚುನಾವಣೆಯಲ್ಲಿ ನಾನು ಬದುಕಲ್ಲ, ಯಾವಾಗ ಸಾಯುತ್ತೀನಿ ಗೊತ್ತಿಲ್ಲ, ಮತ ಹಾಕಿ ಅಂತಾ ಕೇಳುತ್ತಿದ್ದರು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ನಂತರವೂ ನಾನು ಯಾವಾಗ ಹೋಗುತ್ತೀನೋ ಗೊತ್ತಿಲ್ಲ ಅಂತಾ ಕಣ್ಣೀರು ಹಾಕುತ್ತಿದ್ದಾರೆ. ಅವರು ಹೋಗುವುದಾದರೆ ಮೊದಲು ಸಿಎಂ ಕುರ್ಚಿ ಬಿಟ್ಟು ಹೋಗಲಿ ಎಂದು ಹೇಳಿದರು.

ಫಲಿತಾಂಶದ ನಂತರ ಬ್ರದರ್, ಅಣ್ಣಾ ಅಂತಾ ಕಾಂಗ್ರೆಸ್ ಜೊತೆ ಹೋಗಿ ಮೈತ್ರಿ ಮಾಡಿಕೊಂಡ ರೀತಿ ನಾವು ಮಾಡಲ್ಲ. ರಾಜ್ಯದ ಜನತೆ 104 ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿಗೆ ಬಹುಮತ ನೀಡಿದ್ದರು. ಆದರೆ 37 ಸ್ಥಾನಗಳಿಸಿ ಥರ್ಡ್ ಕ್ಲಾಸ್ ತೆಗೆದುಕೊಂಡು ನೀವು ಸರ್ಕಾರ ರಚಿಸಿದ್ದೀರಿ. ಮುಖ್ಯಮಂತ್ರಿಯಾಗಿ 24 ಗಂಟೆಯೊಳಗೆ ಸಾಲಮನ್ನಾ ಮಾಡುತ್ತೇನೆ ಅಂತಾ ಹೇಳಿ, ಇಲ್ಲಿಯವರೆಗೂ ಸಾಲಮನ್ನಾ ಮಾಡುತ್ತಲೇ ಇದ್ದಾರೆ. ಯಾರಿಗಾದರೂ ನಿಮ್ಮ ಸಾಲಮನ್ನಾ ಆಗಿದೆ ಅಂತಾ ಇದ್ದರೇ ಬನ್ನಿ, ಇದೇ ವೇದಿಕೆಯಲ್ಲಿ ನಿಮಗೆ ಸನ್ಮಾನ ಮಾಡುತ್ತೇನೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ, ಮಕ್ಕಳ ಬೈಸಿಕಲ್ ವಿತರಣೆ, ವಿಧವಾ ವೇತನ ಸೇರಿದಂತೆ ಹಲವಾರು ಯೋಜನೆಗೆ ಕಳೆದ ಬಾರಿಯ ಸಿದ್ದರಾಮಯ್ಯ ಸರ್ಕಾರ ಎಳ್ಳು-ನೀರು ಬಿಟ್ಟಿದ್ದಾರೆ. ಇದನ್ನು ಇವರು ಸಹ ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ರೀತಿ ಜಾತಿಯ ಆಧಾರದಲ್ಲಿ ಮತ ಕೇಳುವ ಕೀಳು ಪದ್ಧತಿ ನಮಗಿಲ್ಲ. ಶಿವಮೊಗ್ಗದ ಜನತೆ ಅಭಿವೃದ್ಧಿಯನ್ನು ನೋಡಿ ವೋಟ್ ನೀಡುತ್ತಾರೆಯೇ ಹೊರತು, ಜಾತಿ ನೋಡಿ ಮತ ನೀಡುವುದಿಲ್ಲವೆಂದು ಹೇಳಿದರು.

ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘಣ್ಣನವರು ಭಾರೀ ಅಂತರದಿಂದ ಗೆಲ್ಲುತ್ತಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Comments

Leave a Reply

Your email address will not be published. Required fields are marked *