ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು

ಮುಂಬೈ: ಶಿವಸೇನೆ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಶಿವಸೇನಾ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಏಕಾಂಗಿಯಾಗಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಶಿವಸೇನೆ ಹಿಂದೇಟು ಹಾಕುತ್ತಿದೆ. ಚುನಾವಣೆ ಪೂರ್ವ ಮೈತ್ರಿ ಎರಡೂ ಪಕ್ಷಗಳಿಗೆ ಒಳ್ಳೆಯದಲ್ಲ ಎಂಬ ಲೆಕ್ಕಾಚಾರಗಳು ನಡೆದಿವೆ ಎನ್ನಲಾಗಿದೆ.

ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡರೆ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿವಸೇನೆಗೆ 106 ಸೀಟ್ ನೀಡಲು ಬಿಜೆಪಿ ಮುಂದಾಗಿದೆ. ಉಳಿದ 182 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ ಸಂದೇಶವನ್ನು ಶಿವಸೇನೆಗೆ ರವಾನಿಸಿದೆ. ಮೈತ್ರಿಯಾದ್ರೆ ನಮಗೆ 140 ಕ್ಷೇತ್ರಗಳು ಬೇಕೆಂದು ಶಿವಸೇನೆ ತಿಳಿಸಿದೆ. ಹೀಗಾಗಿ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಹಗ್ಗ-ಜಗ್ಗಾಟ ಆರಂಭಗೊಂಡಿದೆ.

ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಶಿವಸೇನೆ ಮೈತ್ರಿಯಿಂದ ಹೊರ ಬರುವ ಕುರಿತು ಚರ್ಚೆ ನಡೆಸುತ್ತಿದೆ. ಇತ್ತ ಎನ್‍ಡಿಎ ಜೊತೆಗಿನ ಮೈತ್ರಿಯೊಂದಿಗೆ ಚುನಾವಣೆ ಗೆದ್ದರೆ ಮುಖ್ಯಮಂತ್ರಿ ಸ್ಥಾನ ತಮಗೆ ನೀಡಬೇಕೆಂಬ ಶಿವಸೇನೆ ನಾಯಕರು ಷರತ್ತು ವಿಧಿಸಿದ್ದಾರಂತೆ. ಆದ್ರೆ ಬಿಜೆಪಿ ಕನಿಷ್ಠ 160 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸು ಸಿದ್ಧತೆಯಲ್ಲಿದೆ ಎಂದು ವರದಿಗಳು ಪ್ರಕಟಗೊಂಡಿವೆ.

2014ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಫಲಿತಾಂಶದ ಬಳಿಕ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಇತ್ತ ಶಿವಸೇನೆ 63, ಎನ್‍ಸಿಪಿ 41 ಮತ್ತು ಕಾಂಗ್ರೆಸ್ 42 ಕ್ಷೇತ್ರಗಳಲ್ಲಿ ಗೆಲವು ಕಂಡಿತ್ತು.

Comments

Leave a Reply

Your email address will not be published. Required fields are marked *