ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಬೆಳಗ್ಗಿನ ಜಾವ ಮಂಗಳೂರಿಗೆ ಆಗಮಿಸಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಇಂದು ನಡೆಯಲಿರುವ ಜನರಕ್ಷಾ ಯಾತ್ರೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಅಮಿತ್ ಶಾ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಸಂಜೆ 6 ಗಂಟೆಗೆ ವಿಶೇಷ ವಿಮಾನದ ಮೂಲಕ ಆಗಮನ ಎಂದಿದ್ದರೂ ಬಳಿಕ ಬೆಳಗ್ಗಿನ ಜಾವ 1.30ರ ವಿಮಾನದಲ್ಲಿ ಅಮಿತ್ ಶಾ ಮಂಗಳೂರಿಗೆ ಆಗಮಿಸಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಮಿತ್ ಶಾ ಆಗಮಿಸುತ್ತಿದ್ದಂತೆ ಚೆಂಡೆಯ ನಾದದೊಂದಿಗೆ ಅದ್ಧೂರಿ ಸ್ವಾಗತ ಮಾಡಿದ್ರು.

ವಿಶೇಷ ಭದ್ರತೆಯೊಂದಿಗೆ ವಿಮಾನ ನಿಲ್ದಾಣದಿಂದ ಹೊರಬಂದ ಅಮಿತ್ ಶಾ ಕಾರ್ಯಕರ್ತರಿಗೆ ವಿಶ್ ಮಾಡಿದರು. ಬಳಿಕ ರಸ್ತೆ ಮೂಲಕ ಕೇರಳದ ಕಣ್ಣೂರಿಗೆ ತೆರಳಿದರು. ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇಂದು ಪೂರ್ತಿ ಕೇರಳ ಪ್ರವಾಸದಲ್ಲಿದ್ದು ಸಂಜೆ ಮಂಗಳೂರಿಗೆ ಬಂದು ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಮಂಗಳೂರಿನಲ್ಲಿ ನಾಳೆ(ಅ.4) ಬಿಜೆಪಿ ಪದಾಧಿಕಾರಿಗಳ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಅದರಲ್ಲೂ ಕರಾವಳಿಯಲ್ಲಿ ಬಿಜೆಪಿಯನ್ನು ಶಕ್ತಿಯುತವನ್ನಾಗಿಸಲು ಅಮಿತ್ ಶಾ ಮಾಸ್ಟರ್ ಪ್ಲಾನ್ ಮಾಡಿದ್ದು ಅದನ್ನೂ ಈ ಸಭೆಯಲ್ಲಿ ಚರ್ಚಿಸಲಿದ್ದಾರೆ. ಶಾ ಅವರನ್ನು ಸ್ವಾಗತಿಸುವುದಕ್ಕಾಗಿ ಈಗಾಗಲೇ ಮಂಗಳೂರಿನಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಜೊತೆಗೆ ಬಿಜೆಪಿ ಬಾವುಟ ಸಹಿತ ಶೃಂಗಾರ ಮಾಡಲಾಗುತ್ತಿದೆ. ಕದ್ರಿ ಪರಿಸರದಲ್ಲಿ ಪೂರ್ತಿ ಕೇಸರಿಮಯ ಆಗಿದ್ದು, ಬಿಜೆಪಿ ಕಾರ್ಯಕರ್ತರನ್ನು ಆಕರ್ಷಿಸಲು ತಯಾರಿ ನಡೆದಿದೆ.

Comments

Leave a Reply

Your email address will not be published. Required fields are marked *