ಪೌರತ್ವ ಕಾಯ್ದೆ ವಿರೋಧದ ನಡುವೆ ಮತ್ತೊಂದು ಚುನಾವಣೆಗೆ ಬಿಜೆಪಿ ಸಿದ್ಧತೆ

ನವದೆಹಲಿ: ದೇಶದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಬಿಜೆಪಿ ಮತ್ತೊಂದು ಚುನಾವಣೆ ಸಿದ್ಧತೆ ನಡೆಸಿದೆ.

ಮುಂದಿನ ವರ್ಷ ಆರಂಭದಲ್ಲಿ ಬರಲಿರುವ ದೆಹಲಿ ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿ ಇಂದಿನಿಂದ ಅಧಿಕೃತವಾಗಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಚಾಲನೆ ನೀಡಲಿದ್ದು ರಾಷ್ಟ್ರ ರಾಜಧಾನಿ ವಶಪಡಿಸಿಕೊಳ್ಳಲು ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಇಂದು ಬೆಳಗ್ಗೆ 11:30ಕ್ಕೆ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಅವರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭಾರೀ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ರಾಮಲೀಲಾ ಮೈದಾನ ಪೊಲೀಸ್ ಸರ್ಪಗಾವಲಿನಲ್ಲಿದೆ. ರಾಮಲೀಲಾ ಮೈದಾನಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳ ಮೇಲೆ ಸಿಸಿಟಿವಿಗಳ ಮೂಲಕ ತೀವ್ರ ನಿಗಾ ವಹಿಸಲಾಗುತ್ತಿದೆ. ಮೈದಾನದ ಹತ್ತಿರವಿರುವ ಕಟ್ಟಡಗಳ ಮೇಲೆಯೂ ಕೂಡ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ. ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದೆಹಲಿಯಲ್ಲಿ ಸುಮಾರು 1734 ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸಿದ್ದಕ್ಕಾಗಿ ಮತ್ತು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲು BJP ರಾಮಲೀಲಾ ಮೈದಾನದಲ್ಲಿ ಈ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ‘ಧನ್ಯವಾದ ಮೋದಿ’ ಸಮಾವೇಶದ ಮೂಲಕ ಪ್ರಧಾನಿ ಮೋದಿ ದೆಹಲಿ ವಿಧಾನಸಭೆ ಚುನಾವಣೆ-2020ರ ರಣಕಹಳೆ ಕೂಡ ಮೊಳಗಿಸಲಿದ್ದಾರೆ.

ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸುವಿಕೆಯಿಂದ ಸುಮಾರು 40 ಲಕ್ಷ ಜನರಿಗೆ ಮಾಲಿಕತ್ವ ಸಿಗುವ ದಾರಿ ಸುಗಮವಾದಂತಾಗಿದೆ. ಕಳೆದ ತಿಂಗಳಿನಲ್ಲಿಯೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಅನಧಿಕೃತ ಕಾಲೋನಿ ವಸತಿ ಆಸ್ತಿ ಹಕ್ಕುಗಳ ಗುರುತಿಸುವಿಕೆ ಮಸೂದೆ-2019 ಕ್ಕೆ ಅನುಮೋದನೆ ನೀಡಿದ್ದು ಇಲ್ಲಿ ಗಮನಾರ್ಹ. ಇದರಿಂದ ದೆಹಲಿಯ ಸುಮಾರು 1734 ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಸುಮಾರು 40 ಲಕ್ಷ ಜನರಿಗೆ ಅವರ ಆಸ್ತಿಯ ಮಾಲಿಕತ್ವದ ಹಕ್ಕು ಸಿಗುವ ಮಾರ್ಗ ಸುಗಮವಾದಂತಾಗಿದೆ.

Comments

Leave a Reply

Your email address will not be published. Required fields are marked *