ಬೆಂಗಳೂರು: ವಿಧಾನ ಸಭೆ ಚುನಾವಣೆಯ ನೋವು ಮರೆತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿದ್ದಾಗಿ ಹೇಳಿಕೊಂಡಿದ್ದು, ಅದನ್ನು ಶನಿವಾರ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
ಆಗಸ್ಟ್ 9 ಕ್ರಾಂತಿ ದಿನ, ಅವತ್ತೇ ನಮ್ಮ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ರಾಜ್ಯ ಬಿಜೆಪಿ ನಾಯಕರ ನೇತೃತ್ವದಲ್ಲಿ ಒಟ್ಟು 3 ತಂಡಗಳು ರಚನೆಯಾಗಿವೆ. ಒಂದನೇ ತಂಡದ ನೇತೃತ್ವವನ್ನು ನಾನು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಗೋವಿಂದ ಕಾರಜೋಳ ವಹಿಸಿಲಿದ್ದೇವೆ. ನಾವು ಉತ್ತರ ಕರ್ನಾಟಕದ 13 ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದೇವೆ. ಉಳಿದಂತೆ ಎರಡನೇ ತಂಡದಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್, ಅರವಿಂದ ಲಿಂಬಾವಳಿ ಹಾಗೂ ಕೊನೆಯ ತಂಡ ನೇತೃತ್ವವನ್ನು ಈಶ್ವರಪ್ಪ, ಸಿ.ಟಿ.ರವಿ, ಲಕ್ಷ್ಮಣ ಸವದಿ ಅವರು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಲೋಕಸಭೆ ಅಧಿವೇಶನದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳಿಂದ ಬಿಜೆಪಿ ಸ್ಪರ್ಧೆಗೆ ಇಳಿಯಲಿದೆ. ಆದರೆ ಶೋಭಾ ಕರಂದ್ಲಾಜೆ ಮತ್ತು ಡಿ.ವಿ.ಸದಾನಂದಗೌಡ ಅವರ ಮತಕ್ಷೇತ್ರಗಳ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಊಹಾಪೋಹ ಅಷ್ಟೇ. ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಡಿಸೆಂಬರ್ ಒಳಗಾಗಿ ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ಬಗ್ಗೆ ನಾನು ಭವಿಷ್ಯ ಹೇಳುವುದಿಲ್ಲ. ಆದರೆ ಕಾಂಗ್ರೆಸ್-ಜೆಡಿಎಸ್ ಜಗಳ, ಬಡಿದಾಟದಿಂದ ಸರ್ಕಾರ ಬಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದ ಅವರು, ಪುತ್ರ ವಿಜಯೇಂದ್ರ ಅಗತ್ಯವಿರುವ ಕಡೆ ರಾಜ್ಯ ಪ್ರವಾಸ ಮಾಡುತ್ತಾರೆ. ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು.
ಪ್ರತ್ಯೇಕ ರಾಜ್ಯ:
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬಗ್ಗೆ ಬಿಜೆಪಿ ನಾಯಕರು ಬೆಂಬಲ ನೀಡುವುದಿಲ್ಲ. ಶಾಸಕ ಶ್ರೀರಾಮುಲು ಅವರ ಜೊತೆ ನಾನು ಮಾತನಾಡಿರುವೆ. ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು. ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂದು ಒಡೆದು ಆಳುವ ನೀತಿಯನ್ನು ಸಿಎಂ ಕುಮಾರಸ್ವಾಮಿ ತೋರುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ತನ್ನ ನಿಲುವುವನ್ನು ಸ್ಪಷ್ಟಪಡಿಸಬೇಕು. ಒಂದು ರೀತಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನೇರ ಕಾರಣ ಎಂದು ಆರೋಪಿಸಿದರು.

ಹಿರಿಯ ಸಾಹಿತಿಗಳು, ಹೋರಾಟಗಾರರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಆದರೆ ಕುಮಾರಸ್ವಾಮಿ ಅದನ್ನು ಅಧಿಕಾರ ದಾಹದಿಂದ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಅವರು ಕೇವಲ 37 ಕ್ಷೇತ್ರಗಳಿಗೆ ಮಾತ್ರ ಮುಖ್ಯಂಮಂತ್ರಿ ಎನ್ನುವ ರೀತಿ ಇರುವುದು ರಾಜ್ಯದ ದುರ್ದೈವ. ಕುಮಾರಸ್ವಾಮಿ ಕುಟುಂಬದ ಕೆಟ್ಟ ಸ್ವಾರ್ಥಕ್ಕಾಗಿ ಕೈ ಹಿಡಿದವರಿಗೆ ದ್ರೋಹ ಮಾಡಿ, ಈಗ ರಾಜ್ಯ ಒಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆ ಅವರನ್ನು ಎಂದೆಂದೂ ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು.
ಸಂಪೂರ್ಣ ಸಾಲ ಮನ್ನಾದ ಹೋರಾಟದಿಂದ ಬಿಜೆಪಿ ಹಿಂದೆ ಸರಿಯುವುದಿಲ್ಲ. ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಸಾಲಮನ್ನಾ ತಕ್ಷಣ ಆಗಬೇಕು. ಸಂಪೂರ್ಣ ಸಾಲಮನ್ನ ಆಗದೇ ಇರಬಹುದು. ಆದರೆ ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷ ರೂ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 2 ಲಕ್ಷ ರೂ. ಸಾಲಮನ್ನಾ ಶೀಘ್ರವೆ ಮಾಡುವಂತೆ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ ಬಿಎಸ್ ಯಡಿಯೂರಪ್ಪ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಟಾಂಗ್ ಕೊಟ್ಟರು.

Leave a Reply