ಆಪರೇಷನ್ ಕಮಲಕ್ಕೆ ಅಖಾಡ ಸಿದ್ಧ..!

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಪುನಾರಚನೆಯ ಬೆನ್ನಲ್ಲೇ ಆಪರೇಷನ್ ಕಮಲಕ್ಕೆ ಬಿಜೆಪಿ ಅಖಾಡ ಸಿದ್ಧಪಡಿಸಿದೆ ಎಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

ಹೌದು. ಕಾಂಗ್ರೆಸ್‍ನ ಅಸಮಾಧಾನಿತ ಶಾಸಕರಿಗೆ ಬಲೆ ಬೀಸಲು ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಲಿದ್ದಾರೆ. ಇಂದು ಬೆಳಗ್ಗೆ ಮಹತ್ವದ ಮಾತುಕತೆಗೆ ಶಾಸಕ ಶ್ರೀರಾಮುಲು, ಬಿಎಸ್‍ವೈ ಪುತ್ರ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪುತ್ರ ವಿಜೇಯೇಂದ್ರ ಈಗಾಗಲೇ ಬಳ್ಳಾರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್ ಅತೃಪ್ತ ಶಾಸಕರು ಯಾರು..? ಅವರನ್ನ ಹೇಗೆ ಸೆಳೆಯಬೇಕು ಅನ್ನೋ ಬಗ್ಗೆ ಚರ್ಚೆ ನಡೆಯಲಿದ್ದು, ಈ ಮೂಲಕ ಮತ್ತೆ ಬಳ್ಳಾರಿ ನೆಲದಿಂದಲೇ ಆಪರೇಷನ್ ಶುರುವಾಗಲಿದೆ ಎನ್ನಲಾಗುತ್ತಿದೆ.

ಇತ್ತ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿಯನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ‘ಕೈ’ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ತೆರೆಮರೆ ಕಸರತ್ತು ನಡೆಸುತ್ತಿದ್ದು, ಶನಿವಾರ ರಾತ್ರಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬಿಜೆಪಿ ನಾಯಕ ಶ್ರೀರಾಮುಲು ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ನನ್ನ ನಿರ್ಧಾರಕ್ಕೆ ಕನಿಷ್ಠ ಮೂರ್ನಾಲ್ಕು ದಿನಗಳು ಬೇಕಾಗುತ್ತದೆ. ನನ್ನ ಜೊತೆ ಒಂದಷ್ಟು ಅಸಮಾಧಾನಿತ ಶಾಸಕರುಗಳು ಇದ್ದಾರೆ. ಅವರ ಜೊತೆಯೂ ಕೂಡ ನಾನು ಮಾತುಕತೆ ನಡೆಸಬೇಕಾಗಿದೆ. ಆ ಬಳಿಕ ನನ್ನ ಸ್ಪಷ್ಟ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ನೀವು ಅಂತಿಮ ತೀರ್ಮಾನ ಮಾಡಿದ ಬಳಿಕವಷ್ಟೇ ಬಿಜೆಪಿ ನಡೆ ಸ್ಪಷ್ಟವಾಗುತ್ತದೆ. ಅಲ್ಲಿ ತನಕ ಯಡಿಯೂರಪ್ಪ ಅವರು ಕೂಡ ಯಾವುದೇ ಚಟುವಟಿಕೆ ಕೈ ಹಾಕಲ್ಲ. ಅದಷ್ಟು ಬೇಗ ನಿರ್ಧಾರ ಮಾಡಿ ಎಂದು ರಮೇಶ್ ಜಾರಕಿಹೊಳಿಗೆ ಶ್ರೀರಾಮುಲು ದೂರವಾಣಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಈ ಮೂಲಕ ರಮೇಶ್ ಜಾರಕಿಹೊಳಿ ಕೈ ಬಿಡ್ತಾರಾ..? ಕಮಲ ಹಿಡಿತಾರಾ…? ಅನ್ನೋ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಇನ್ನೆರಡು ದಿನದಲ್ಲಿ ರಮೇಶ್ ಜಾರಕಿಹೊಳಿ ನಿರ್ಧಾರ ಸ್ಪಷ್ಟವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *