ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉರುಳಿಸಲು ಬಿಜೆಪಿ ತಂತ್ರ: ಬಿಎಸ್‍ವೈ ದಿಢೀರ್ ದೆಹಲಿಗೆ ಹೋಗಿದ್ದು ಯಾಕೆ?

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ವಿಪಕ್ಷ ಬಿಜೆಪಿ ತೆರೆಮರೆಯಲ್ಲಿ ಪ್ರಯತ್ನ ಆರಂಭಿಸಿದೆ.

ಹೌದು. ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲಕ್ಕೆ ಬಿಜೆಪಿ ಹಾಕಿದ್ದು ಕಾಂಗ್ರೆಸ್- ಜೆಡಿಎಸ್ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಬೆನ್ನಲ್ಲೇ ಸರ್ಕಾರ ಶಾಸಕರನ್ನು ಉಳಿಸಿಕೊಳ್ಳಲು ಅಲರ್ಟ್ ಆಗಿದೆ.

ಕಾಂಗ್ರೆಸ್ಸಿನ 14 ಮಂದಿ ಶಾಸಕರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಹೈಕಮಾಂಡ್ ತಂತ್ರ ಹೂಡಿದೆ. ಶ್ರಾವಣದಲ್ಲಿ ಆ ಶಾಸಕರನ್ನು ಸೆಳೆಯಲು ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಸೋಮವಾರ ನಂಜನಗೂಡಿನಲ್ಲಿ ಬಿಜೆಪಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ ದಿಢೀರ್ ಆಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯಲ್ಲಿ ಅಮಿತ್ ಶಾ ಜೊತೆಗಿನ ಮಾತುಕತೆಯ ವೇಳೆ ಜೆಡಿಎಸ್, ಕಾಂಗ್ರೆಸ್ ಅತೃಪ್ತ ಶಾಸಕರ ಪಟ್ಟಿಯನ್ನು ಬಿಎಸ್‍ವೈ ನೀಡಿದ್ದಾರೆ ಎನ್ನಲಾಗಿದೆ.

ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈಗ ಬಹಿರಂಗವಾಗಿ ಬಿಜೆಪಿ ವಿರುದ್ಧ ಈಗ ವಾಗ್ದಾಳಿ ನಡೆಸಲು ಗುಪ್ತಚರ ಇಲಾಖೆಯ ಮಾಹಿತಿಯೇ ಕಾರಣ ಎನ್ನಲಾಗಿದೆ.

ಏನಾದರೂ ಮಾಡಿ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಅವರು ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿ, ಆಮಿಷ ಒಡ್ಡುತ್ತಿದ್ದಾರೆ. 5 ಜನ ಬಿಜೆಪಿ ನಾಯಕರು ದಿನನಿತ್ಯ ಇದೇ ಕೆಲಸದಲ್ಲಿ ತೊಡಗಿದ್ದಾರೆ ಎನ್ನುವ ಎಲ್ಲ ಮಾಹಿತಿ ನಮಗೆ ಗೊತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಧರ್ಮ, ನೈತಿಕತೆ ಬಗ್ಗೆ ಮಾತನಾಡುವ ಬಿಜೆಪಿಯವರು, ದೇವರು, ಸ್ವಾಮೀಜಿಗಳ ಕಾಲಿಗೆ ಬೀಳುತ್ತಾರೆ. ಆದರೆ ಮಾಡುವ ಕೆಲಸ ಮಾತ್ರ ಅನೈತಿಕವೇ. ಕೇವಲ ಅಧಿಕಾರಕ್ಕಾಗಿ ತಂತ್ರ ಹೂಡಿ, ಆಪರೇಷನ್ ಕಮಲದ ಮೂಲಕ ರಾಜ್ಯದ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *