ಬೆಂಗ್ಳೂರಿಗರೇ ಸಂಡೆ ಮಸ್ತಿಗೆ ಹೊರಬಂದ್ರೆ ಪರದಾಟ ಗ್ಯಾರೆಂಟಿ- ಬಸ್ಸೇ ಇಲ್ದಿದ್ರೂ ಇಂದು ಟ್ರಾಫಿಕ್ ಜಾಮ್ ಫಿಕ್ಸ್

ಬೆಂಗಳೂರು: ಬೆಂಗಳೂರಿಗರೇ ಇಂದು ರಸ್ತೆಗೆ ಇಳಿಯುವ ಮುನ್ನ ಸ್ವಲ್ಪ ಹುಷಾರಾಗಿರಿ. ವೀಕೆಂಡ್ ಅಂತ ಟೈಮ್ ಪಾಸ್‍ಗೆ ಹೊರಗೆ ಬಂದ್ರೆ ನೀವು ಪರದಾಡೋದು ಗ್ಯಾರೆಂಟಿ.

ಹೌದು. ಇಂದು ಪ್ರಧಾನಿ ಮೋದಿ ಸಮಾವೇಶದಲ್ಲಿ ಮೂರೂವರೆಯಿಂದ ನಾಲ್ಕು ಲಕ್ಷದವರೆಗೆ ಜನ ಭಾಗಿಯಾಗುವ ನಿರೀಕ್ಷೆಯಿದ್ದು, ನಗರದಾದ್ಯಂತ ಭಾರಿ ಟ್ರಾಫಿಕ್ ಜಾಮ್ ಉಂಟಾಗೋ ಸಾಧ್ಯತೆ ಇದೆ. ಹೆಚ್‍ಎಎಲ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್, ಏರ್ ಪೋರ್ಟ್ ರೋಡ್, ಅರಮನೆ ಮೈದಾನ ಸೇರಿದಂತೆ ನೆಲಮಂಗಲ ಟೋಲ್ ಗೇಟ್ ಕೂಡ ಜಾಮ್ ಆಗಲಿದೆ.

ಇದ್ರ ಜೊತೆಗೆ ಫ್ರೀಡಂಪಾರ್ಕ್‍ನಿಂದ ಅರಮನೆ ಮೈದಾನದವರೆಗೆ ಕನ್ನಡ ಒಕ್ಕೂಟದ ವಾಟಾಳ್ ನೇತೃತ್ವದಲ್ಲಿ ಜಾಥಾ ನಡೆಯಲಿದ್ದು ಮೆಜೆಸ್ಟಿಕ್, ಫ್ರೀಡಂಪಾರ್ಕ್ ಬಳಿಯೂ ಟ್ರಾಫಿಕ್ ಜಾಮ್ ಉಂಟಾಗಲಿದೆ. ಹೀಗಾಗಿ ಇಂದು ಬೆಂಗಳೂರು ರೋಡ್‍ಲ್ಲಿ ಸಂಚರಿಸಿದ್ರೆ ಟ್ರಾಫಿಕ್ ಬಿಸಿಯಲ್ಲಿ ತಗ್ಲಾಕ್ಕೊಳ್ಳೋದು ಗ್ಯಾರಂಟಿಯಾಗಿದೆ.

ಎಲ್ಲಾ ಅಡೆತಡೆ, ಅಡ್ಡಿ ಆತಂಕದ ಬಳಿಕ ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಕಳೆದ 85 ದಿನಗಳಿಂದ ತಿಂಗಳಿಂದ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಆ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಮತ್ತೊಂದು ಹಂತದ ಪ್ರಚಾರಕ್ಕೆ ನಾಂದಿ ಹಾಡಲಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ರಾಜ್ಯ ನಾಯಕರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. 2014ರ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಪ್ರಧಾನಿ ಮೋದಿಯ ದೊಡ್ಡ ಸಮಾವೇಶ ಇದಾಗಲಿದೆ. ಅರ್ಧ ಕಿಲೋಮೀಟರ್ ದೂರದವರೆಗೂ ವೇದಿಕೆ ಕಾಣುವಂತೆ ಸುಮಾರು 20 ಅಡಿ ಎತ್ತರದಲ್ಲಿ ವೇದಿಕೆ ನಿರ್ಮಿಸಲಾಗಿದೆ. ಪಕ್ಷದ 27 ಮಂದಿ ಅಗ್ರ ನಾಯಕರಿಗಷ್ಟೇ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮೈದಾನದ ಮಧ್ಯೆ 25 ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.

ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ರಾಜ್ಯಕ್ಕೆ ಏನಾದರೂ ಕೊಡುಗೆ ಘೋಷಿಸುವ ಸಾಧ್ಯತೆ ಇದೆ. 16 ಜಿಲ್ಲೆಗಳಿಂದ ಜನರನ್ನು ಕರೆತರಲು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಸೇರಿದಂತೆ ಸಾವಿರಾರು ವಾಹನಗಳನ್ನು ಬುಕ್ ಮಾಡಲಾಗಿದೆ. ಊಟದ ವ್ಯವಸ್ಥೆಗಾಗಿ 600 ಮಂದಿ ಅಡುಗೆ ಭಟ್ಟರನ್ನು ನಿಯೋಜಿಸಲಾಗಿದ್ದು, 250 ಫುಡ್ ಕೌಂಟರ್ ತೆರೆಯಲಾಗಿದೆ. ಜೊತೆಗೆ 75 ಇ – ಶೌಚಾಲಯ, 270 ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಾದ್ಯಂತ ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

Comments

Leave a Reply

Your email address will not be published. Required fields are marked *