ವಿಪಕ್ಷ ನಾಯಕನ ಆಯ್ಕೆಗೆ ಕೈ ಟೀಕೆ- ನಾನು ಗಟ್ಟಿ ಕಮಲ, ತರಗೆಲೆ ಅಲ್ಲ ಅಂದ್ರು ಅಶೋಕ್

ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆಗೆ ಕಾಂಗ್ರೆಸ್ (Congress) ಟೀಕೆ ವ್ಯಕ್ತಪಡಿಸಿದ್ದು, ಇದಕ್ಕೆ ಆರ್ ಅಶೋಕ್ (R Ashok) ಕೂಡ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಮುಂದೆ ಅಶೋಕ್ ತರಗೆಲೆ ಎಂದ ಕಾಂಗ್ರೆಸ್‍ಗೆ ನಾನು ಗಟ್ಟಿ ಕಮಲ ತರಗೆಲೆ ಅಲ್ಲ ಎಂದು ಹೇಳುವ ಮೂಲಕ ನೂತನ ವಿಪಕ್ಷ ನಾಯಕ ಟಾಂಗ್ ಕೊಟ್ಟರು. ಇದನ್ನೂ ಓದಿ: ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ

ಕಾಂಗ್ರೆಸ್ ಎಕ್ಸ್ ನಲ್ಲೇನಿದೆ..?: ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ! (Oppositon Party Leader). ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿದ್ದು ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ನಿದರ್ಶನ. ಸಿದ್ದರಾಮಯ್ಯ ಹಾಗೂ, ಡಿಕೆ ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ತಂದು ಕೂರಿಸಿದೆ ಬಿಜೆಪಿ!

ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ?. ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ, ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ ಎಂದು ಬಿಜೆಪಿ ಕರ್ನಾಟಕಕ್ಕೆ ಟ್ಯಾಗ್ ಮಾಡಲಾಗಿದೆ. ಇದನ್ನೂ ಓದಿ: ದ್ವೇಷ ಭಾವನೆ ಮಾಡದೇ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ: ಅಶೋಕ್ ಭರವಸೆ

ಇತ್ತ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ನಾನು ಸಿದ್ದರಾಮಯ್ಯ ತರಹ ಎಲ್ಲಾ ಪಾರ್ಟಿ ಓಡಾಡಿಕೊಂಡು ಬಂದಿಲ್ಲ ಉದುರು ಹೋಗೋದಕ್ಕೆ. ನಮ್ಮದು ಒಂದೇ ಪಾರ್ಟಿ, ಒಂದೇ ಸಿದ್ದಾಂತ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇದ್ದಾಗ, ಜೆಡಿಎಸ್ ನಲ್ಲಿ ಒಂದು ಸಿದ್ದಾಂತ. ನಾನು ಗಟ್ಟಿ ಕಮಲ. ತರಗೆಲೆ ಅಲ್ಲ ಎಂದು ತಿರುಗೇಟು ನೀಡಿದರು.

ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಆರ್ ಅಶೋಕ್ ಅವರ ಹೆಸರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಸೂಚಿಸಲಾಯಿತು. ಈ ವೇಳೆ ನಿರ್ಮಲಾ ಸೀತಾರಾಮನ್, ಅಶ್ವತ್ಥ ನಾರಾಯಣ, ಮುನಿರತ್ನ, ಗೋಪಾಲಯ್ಯ, ವಿಜಯೇಂದ್ರ, ಅಶೋಕ್, ಎಸ್ ಆರ್ ವಿಶ್ವನಾಥ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಗೂ ಮುನ್ನ ಹೈಡ್ರಾಮಾವೊಂದು ನಡೆದಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೆಶ್ ಜಾರಕಿಹೊಳಿಯವರು ಸಭೆಯಿಂದ ಹೊರ ನಡೆದಿದ್ದರು.