ದೇವಾಲಯ ಕಟ್ಟಲು ಬಂದವರು ನಾವು, ಕೆಡವಲು ಬಂದವರಲ್ಲ: ಸಿ.ಟಿ ರವಿ

– ಅಚಾತುರ್ಯ ಆಗಿದೆ, ಹೇಗಾಯ್ತು ಗೊತ್ತಿಲ್ಲ

ಬೆಂಗಳೂರು: ನಾವು ದೇವಾಲಯ ಕಟ್ಟಲು ಬಂದವರು, ಕೆಡವಲು ಬಂದವರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಂಜನಗೂಡು ದೇವಾಲಯ ಕೆಡವಿದರ ಕುರಿತು ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಂಜನಗೂಡು ದೇವಸ್ಥಾನ ಕೆಡವಲಾಗಿತ್ತು. ದೊಡ್ಡ ಪ್ರಮಾಣದಲ್ಲಿ ಭಕ್ತಾದಿಗಳ ಭಾವನೆಗೆ ಧಕ್ಕೆ ಆಗಿತ್ತು ಎಂದರು.

ನಮ್ಮ ದೇಶದಲ್ಲಿ ಭಾವನೆಗಳ ಆಧಾರದ ಮೇಲೆಯೇ ನಾವೆಲ್ಲ ಇರೋದು. ಸೃಷ್ಟಿಯೇ ಭಗವಂತ ಅಂತ ನಂಬುವವರು ನಾವು. ದೇವಾಲಯ ಕಟ್ಟಲು ಬಂದೋವ್ರು ನಾವು ಕೆಡವಲು ಬಂದೋವ್ರಲ್ಲ. ಅಚಾತುರ್ಯ ಆಗಿದೆ ಅದು ಹೇಗಾಯ್ತೋ ಗೊತ್ತಿಲ್ಲ. ಆದರೆ ಅದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಸಿ.ಟಿ ರವಿ ಸಮಜಾಯಿಷಿ ನೀಡಿದ್ದಾರೆ. ಇದನ್ನೂ ಓದಿ: ಜೂಜಾಟದ ಬಿಗಿ ಕ್ರಮಕ್ಕೆ, ಪೊಲೀಸ್ ಕಾಯ್ದೆ ತಿದ್ದುಪಡಿ ತರುತ್ತಿದ್ದೇವೆ: ಬೊಮ್ಮಾಯಿ

ಹೊಸ ಮಸೂದೆಯನ್ನು ತರುವ ಮೂಲಕ ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಗಾಗಿ ದೇವಸ್ಥಾನಕ್ಕೆ ರಕ್ಷಣೆ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ನೀತಿಯನ್ನು ನಾನು ಸ್ವಾಗತಿಸುತ್ತಿದ್ದೇನೆ. ದೇವಸ್ಥಾನ ಒಡೆದಾಗ ಕಾಂಗ್ರೆಸ್ ಟೀಕೆ ಮಾಡಿತ್ತು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ಆದರೆ ಇಷ್ಟು ಬೇಗ ಕಾಂಗ್ರೆಸ್ ಅವರು ಬಣ್ಣ ಬದಲಾಯಿಸಿದ್ರು. ಈಗ ನಾವು ತರುತ್ತಿರುವ ಮಸೂದೆಯನ್ನು ಪ್ರಶ್ನಿಸ್ತಾ ಇದ್ದಾರೆ. ಅವರದ್ದು ಸೋಗಲಾಡಿತನ ಅನ್ನೋದು ಅರ್ಥ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  MSc ಓದಿ ಕಸ ಗುಡಿಸುತ್ತಿದ್ದ ಮಹಿಳೆಗೆ ಸರ್ಕಾರಿ ಕೆಲಸ ಕೊಟ್ಟ ಸಚಿವರು

ಕಾಂಗ್ರೆಸ್ ಅವರು ಹಿಂದೆಯೂ ಹಿಂದು ಪರ ಇಲ್ಲ. ಈಗಲೂ ಇಲ್ಲ ಅನ್ನೋದು ಗೊತ್ತಾಗ್ತಾ ಇದೆ. ಬಿಜೆಪಿ ಮೇಲೆ ಆರೋಪ ಹೊರಿಸಲು ಅವಕಾಶ ಅಂತ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ಹೋರಾಟ ನಾಟಕೀಯವಾಗಿದ್ದು, ಡ್ರಾಮ ಅನ್ನೋದು ಅರ್ಥ ಆಗುತ್ತಿದೆ. ಡ್ರಾಮ ಅಲ್ಲದೇ ಹೋದರೆ ಈಗ್ಯಾಕೆ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಅಂತ ಉತ್ತರಿಸಬೇಕು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *