ಪುಣೆಯ ಐತಿಹಾಸಿಕ ಶನಿವಾರ್ ವಾಡಾದಲ್ಲಿ ಮಹಿಳೆಯರಿಂದ ನಮಾಜ್ – ಗೋಮೂತ್ರದಿಂದ ಶುದ್ಧೀಕರಿಸಿದ ಬಿಜೆಪಿ ಎಂಪಿ

ಮುಂಬೈ: ಪುಣೆಯ ಐತಿಹಾಸಿಕ ಕೋಟೆ ಶನಿವಾರ್ ವಾಡಾದಲ್ಲಿ (Shaniwar wada) ಕೆಲವು ಮುಸ್ಲಿಂ ಮಹಿಳೆಯರು ನಮಾಜ್ ಮಾಡಿರುವುದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ನಮಾಜ್‌ನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ (BJP) ಸಂಸದೆ ಮೇಧಾ ಕುಲಕರ್ಣಿ (Medha Kulkarni) ಮತ್ತು ಕೆಲವು ಹಿಂದೂ ಸಂಘಟನೆಗಳು ಆ ಸ್ಥಳವನ್ನು ಗೋಮೂತ್ರದಿಂದ ತೊಳೆದು ಶಿವವಂದನೆ ಸಲ್ಲಿಸುವ ಮೂಲಕ ಶುದ್ಧೀಕರಿಸಿದರು.

ಬಳಿಕ ಈ ಕುರಿತು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಮಾತನಾಡಿ, ಶನಿವಾರ್ ವಾಡಾ ನಮಾಜ್ ಮಾಡಲು ಸೂಕ್ತ ಸ್ಥಳವಲ್ಲ. ಆದರೆ ಈಗ ನಾವು ಶುದ್ಧೀಕರಣ ಮಾಡಿ, ಅಲ್ಲಿ ಶಿವವಂದನೆ ಮಾಡಿದ್ದೇವೆ. ನಾವು ಕೇಸರಿ ಧ್ವಜವನ್ನು ಹಾರಿಸಲು ಪ್ರಯತ್ನಿಸಿದೆವು, ಆದರೆ ಆಡಳಿತ ಮಂಡಳಿ ನಮ್ಮನ್ನು ತಡೆಯಿತು. ಈ ಜನರು ಎಲ್ಲೆಂದರಲ್ಲಿ ನಮಾಜ್ ಮಾಡುತ್ತಾರೆ. ನಂತರ ಅದನ್ನು ವಕ್ಫ್ ಆಸ್ತಿಯಾಗಿ ಸೇರಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: ಶ್ರೀರಾಮ ಘನತೆಯ ಸಂಕೇತ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ – ದೀಪಾವಳಿಗೆ ದೇಶವಾಸಿಗಳಿಗೆ ಪತ್ರ ಬರೆದ ಮೋದಿ

ಈ ಸ್ಥಳ ಮರಾಠಾ ಸಾಮ್ರಾಜ್ಯದ ಸಂಕೇತವಾಗಿದೆ. ಹಾಗಾಗಿ ಅಲ್ಲಿ ನಮಾಜ್ ಮಾಡುವುದು ಪ್ರತಿಯೊಬ್ಬ ಪುಣೆ ನಿವಾಸಿಗೂ ಕಳವಳ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಮಹಾರಾಷ್ಟ್ರ ಸರ್ಕಾರದ ಸಚಿವ ನಿತೇಶ್ ರಾಣೆ ಕೂಡ ನಮಾಜ್ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಶನಿವಾರ್ ವಾಡಾ ನಮ್ಮ ಶೌರ್ಯದ ಸಂಕೇತವಾಗಿದೆ. ಹಿಂದೂಗಳು ಹಾಜಿ ಅಲಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರೆ, ಅದು ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಆದ್ದರಿಂದ, ಮಸೀದಿಯಲ್ಲಿ ಮಾತ್ರ ನಮಾಜ್ ಮಾಡಬೇಕು ಅಸಮಾಧಾನ ವ್ಯಕ್ತಪಡಿಸಿದರು.

ಗೋಮೂತ್ರದಿಂದ ಶುದ್ಧೀಕರಿಸುತ್ತಿದ್ದಂತೆ ಬಿಜೆಪಿ ಧಾರ್ಮಿಕ ದ್ವೇಷವನ್ನು ಹರಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಎನ್‌ಸಿಪಿ ನಾಯಕಿ ರೂಪಾಲಿ ಪಾಟೀಲ್ ಥೋಂಬರೆ, ಮೇಧಾ ಕುಲಕರ್ಣಿ ಧಾರ್ಮಿಕ ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಮೂರು ಅಥವಾ ನಾಲ್ಕು ಮುಸ್ಲಿಂ ಮಹಿಳೆಯರು ಶುಕ್ರವಾರ ನಮಾಜ್ ಮಾಡಿದರೆ ಏನಾಗುತ್ತದೆ? ರೈಲುಗಳಲ್ಲಿ ಅಥವಾ ವಿಮಾನ ನಿಲ್ದಾಣದಲ್ಲಿ ಗರ್ಬಾ ಪ್ರದರ್ಶನ ಮಾಡಿದಾಗ ನಾವು ಎಂದಿಗೂ ಆಕ್ಷೇಪಿಸುವುದಿಲ್ಲ. ಶನಿವಾರ್ ವಾಡಾ ಎಎಸ್‌ಐ ಸಂರಕ್ಷಿತ ಸ್ಥಳವಾಗಿದ್ದು, ಎಲ್ಲರಿಗೂ ಅದನ್ನು ಭೇಟಿ ಮಾಡುವ ಹಕ್ಕಿದೆ ಎಂದು ಹೇಳಿದರು.

ಈ ಕುರಿತು ಪುಣೆ ಪೊಲೀಸರು ಮಾಹಿತಿ ನೀಡಿದ್ದು, ರಾಜಕೀಯ ಆರೋಪ ಪ್ರತ್ಯಾರೋಪಗಳ ನಡುವೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಕೆಲವು ಮಹಿಳೆಯರ ಹೆಸರುಗಳನ್ನು ಉಲ್ಲೇಖಿಸಿ ಪ್ರಕರಣ ದಾಖಲಿಸಲಾಗಿದೆ. ಕೋಟೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎಎಸ್‌ಐ ಸೂಚನೆಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇದನ್ನೂ ಓದಿ: ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್‌ ನಖ್ವಿಗೆ ಬಿಸಿಸಿಐ ವಾರ್ನಿಂಗ್‌