80 ಗಂಟೆ ಫಡ್ನವಿಸ್ ಸಿಎಂ ಆಗಿದ್ದು ಏಕೆ?- ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಯ ವಿಡಿಯೋ ವೈರಲ್

ಬೆಂಗಳೂರು/ಕಾರವಾರ: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದು ಡ್ರಾಮಾ ಎಂದು ಸ್ವತಃ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಹೇಳಿದ್ದಾರೆ.

ಸಂಸದರು ಇಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಪ್ರಚಾರದಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದ್ದಾರೆ. ಹೆಗ್ಡೆ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ವಿಡಿಯೋದಲ್ಲಿ ಹೇಳಿದ್ದೇನು..?
ನಿಮಗೆಲ್ಲ ಗೊತ್ತಿದೆ. ಮಹರಾಷ್ಟ್ರದಲ್ಲಿ ಕೇವಲ 80 ತಾಸಿಗೆ ನಮ್ಮವರು ಮುಖ್ಯಮಂತ್ರಿಯಾದರು. ನಂತರ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಯಾಕೆ ಈ ನಾಟಕ ಮಾಡಬೇಕಿತ್ತು?. ನಮಗೇನೂ ಗೊತ್ತಿರಲಿಲ್ವ. ಬಹುಮತ ಇಲ್ಲ ಎಂದು ಗೊತ್ತಿದ್ದರೂ ಯಾಕೆ ಸಿಎಂ ಆಗಲು ಹೋದ್ರು? ಇಂದು ಸಾಮಾನ್ಯವಾಗಿ ಎಲ್ಲರೂ ಕೇಳಬಹುದಾದ ಪ್ರಶ್ನೆಯಾಗಿದೆ.

ಸುಮಾರು 40 ಸಾವಿರ ಕೋಟಿ ರೂಗೂ ಹೆಚ್ಚು ಹಣ ಸಿಎಂ ಅವರ ನಿಯಂತ್ರಣದಲ್ಲಿತ್ತು. ಕಾಂಗ್ರೆಸ್ಸಿನವರು, ಎನ್‍ಸಿಪಿ ಮತ್ತು ಶಿವಸೇನೆಯವರು ಬಂದರೆ ಖಂಡಿತವಾಗಿ ಆ 40 ಸಾವಿರ ಕೋಟಿ ರೂ. ಹಣಕ್ಕೂ ತುಳಸಿ ನೀರು ಬಿಡುತ್ತಿದ್ದರು. ಅದು ಅಭಿವೃದ್ಧಿಗೆ ಹೋಗುತ್ತಿರಲಿಲ್ಲ. ಯಾಕಂದರೆ ಅದಷ್ಟೂ ಕೇಂದ್ರ ಸರ್ಕಾರದ್ದಾಗಿತ್ತು. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿವಸೇನೆ ವಿರುದ್ಧ ಫಡ್ನವಿಸ್ ಕಿಡಿ

ಈ ಎಲ್ಲಾನು ಮುಂಚೆನೇ ಪ್ಲಾನ್ ಮಾಡಿದ್ದರು. ಹೀಗಾಗಿ ಏನಾದ್ರೂ ಆಗಲಿ ಒಂದು ದೊಡ್ಡ ನಾಟಕ ಆದರೂ ಮಾಡಲೇಬೇಕು ಅಂತ ತೀರ್ಮಾನವಾಯಿತು. ಅದಕ್ಕೋಸ್ಕರ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಮಾಡಿ 15 ಗಂಟೆಯೊಳಗಡೆ ಅದಷ್ಟೂ ಹಣವನ್ನು ಎಲ್ಲೆಲ್ಲಿ ತಲುಪಿಸಬೇಕಿತ್ತೋ ಅಲ್ಲಲ್ಲಿ ತಪಿಸುವ ಮೂಲಕ ವ್ಯವಸ್ಥಿತವಾಗಿ ಅದನ್ನು ರಕ್ಷಣೆ ಮಾಡುವ ಕೆಲಸವನ್ನು ಫಡ್ನವಿಸ್ ಮಾಡಿದರು.

ಸಂಪೂರ್ಣವಾಗಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ನೀಡಿದರು. ಇಲ್ಲೇ ಇದ್ದರೆ ಮುಂದಿನ ಮುಖ್ಯಮಂತ್ರಿ ಮುಂದೇನು ಮಾಡಬಹುದೆಂದು ನಿಮಗೆ ಗೊತ್ತಿದೆ ಅಲ್ವ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯ ಖಾತೆಯಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಈ ದುಡ್ಡನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಖಾತೆಗೆ ವರ್ಗಾ ಮಾಡಬೇಕಿತ್ತು. ಅದಕ್ಕಾಗಿ ನಾಟಕ ಮಾಡಿದರು ಎಂದು ಹೇಳಿದ್ದು, ಸದ್ಯ ಸಂಸದರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Comments

Leave a Reply

Your email address will not be published. Required fields are marked *